ಕಗ್ಗ ದರ್ಶನ - ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ವಿಶ್ಲೇಷಣೆಯ ಸರಣಿಯನ್ನು ಪ್ರಾರಂಭಿಸಿರುವ ಪ್ರವೀಣ್ ಶಿವಶಂಕರ ಪ್ರವೀಣ್ ಅಮೆರಿಕಾದ ಕ್ಯಾನ್ಸಾಸ್‍ನಲ್ಲಿ ವಾಸವಾಗಿದ್ದು, ಈಗಷ್ಟೇ ಉನ್ನತ ಶಿಕ್ಶಣ (MS) ಮುಗಿಸಿ, ಸಾಫ್ಟ್‍ವೇರ್ ಇಂಜಿನಿಯರ್ ವೃತ್ತಿಯಲ್ಲಿದ್ದಾರೆ - ಸಂ
"ಏನೀ ಮಹಾನಂದವೇ! ಓ ಭಾಮಿನಿ!" ಈ ಹಾಡನ್ನು ಕೇಳಿ ನಲಿಯದವರೇ ಇಲ್ಲ! "ಅಂತಃಪುರ ಗೀತೆ" ಎಂಬ ಸುಂದರವಾದ ಕವನ ಸಂಕಲನವನ್ನು ಬರೆದು, ಕನ್ನಡ ಸಾಹಿತ್ಯಕ್ಕೆ ಸಕಲ ಪುರಾಣ ಶಾಸ್ತ್ರಗಳ ಒಟ್ಟು ಸಾರವಾಗಿ ಅದ್ಭುತವಾಗಿ ರಚಿಸಿರುವ "ಮಂಕುತಿಮ್ಮನ ಕಗ್ಗ"ವನ್ನು ರಚಿಸಿದವರು ಡಿ.ವಿ. ಗುಂಡಪ್ಪನವರು.
ಡಿ.ವಿ.ಜಿ. ಎಂದೇ ಪ್ರಖ್ಯಾತರಾದ ಇವರ ಇತರ ಕೃತಿಗಳು "ಉಮರನ ಒಸಗೆ", "ಜ್ಞಾಪಕ ಚಿತ್ರಮಾಲೆ", "ಜೀವನ ಸೌಂದರ್ಯ ಮತ್ತು ಸಾಹಿತ್ಯ", "ಶ್ರೀ ಕೃಷ್ಣ ಪರೀಕ್ಷಣಂ", "ಮರಳು ಮುನಿಯನ ಕಗ್ಗ", ಇತ್ಯಾದಿ.
ಇವರಿಗೆ "ಕನ್ನಡ ಸಾಹಿತ್ಯ ಅಕಾಡೆಮಿ" ಪ್ರಶಸ್ತಿ ದೊರಕಿದೆ. ಇಲ್ಲಿ ಮಂಕುತಿಮ್ಮನ ಕಗ್ಗ ಕೃತಿಯ ಪದ್ಯಗಳ ಬಗ್ಗೆ ವಿಶ್ಲೇಷಣೆಗಳನ್ನು ಈ ಮೂಲಕ ಆಹ್ವಾನಿಸುತ್ತೇವೆ.
ಏನು ಜೀವನದರ್ಥ? ಏನು ಪ್ರಪಂಚಾರ್ಥ?
ಏನು ಜೀವ ಪ್ರಪಂಚಗಳ ಸಂಬಂಧ?||
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ ||
"ಮಂಕುತಿಮ್ಮನ ಕಗ್ಗ"ದಲ್ಲಿ ಮೊದಲಿನ ಕೆಲವಾರು ಪದ್ಯಗಳಲ್ಲಿ, ನೇಮದಂತೆ, ಡಿ.ವಿ.ಜಿ ಅವರು ಭಗವಂತನ ಸ್ಮರಣೆಯನ್ನು ಮಾಡುತ್ತಾರೆ. "ಆ ಗಹನ ತತ್ವಕ್ಕೆ", "ಆ ವಿಶೇಷಕ್ಕೆ", "ಆ ವಿಚಿತ್ರಕ್ಕೆ" ಶರಣಾಗು ಎನ್ನುತ್ತಾರೆ. ನಂತರದ ಪದ್ಯಗಳಲ್ಲಿ ಆಶ್ಚರ್ಯವೆಂಬಂತೆ ಅದೇ ತತ್ವದ ಬಗ್ಗೆ ತಮ್ಮ ಪ್ರಶ್ನೆಗಳನ್ನು, ಸಂದೇಹಗಳನ್ನು ಎತ್ತುತ್ತಾರೆ. ಇಂಥ ಪದ್ಯಗಳಲ್ಲಿ ಮೊದಲನೆಯದು ಇದು.
ಇದರಲ್ಲಿ ಜೀವನದ ಬಗ್ಗೆ ಅವರು ಪ್ರಶ್ನಿಸುತ್ತಾರೆ. ನಮ್ಮೀ ಬದುಕಿನ ಉದ್ದೇಶ, ಅರ್ಥಗಳ ಬಗ್ಗೆ ಅವರ ಮನಸ್ಸು ತಾಕಲಾಡುತ್ತದೆ. ನಾವು (ಅಂದರೆ ಜೀವ) ಹಾಗು ನಮ್ಮೀ ಪ್ರಪಂಚದ ಮಧ್ಯೆ ಇರುವ ಸಂಬಂಧವೆಂಥದ್ದು? ನಮಗೆ ಗೋಚರವಾಗುವ ಪ್ರಪಂಚವೊಂದಿದ್ದರೆ, ನಮಗೆ ಅಗೋಚರವಾದದ್ದೂ ಒಂದು ಇದೆಯೆ? (ಇಡೀ ವಿಶ್ವವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ತುಂಬಿರುವ ವೈರುಧ್ಯಗಳು ಕಾಣದಿರುವುದಿಲ್ಲ. ಹಗಲು, ರಾತ್ರಿ, ಭೂಮಿ, ಆಗಸ, ಫಲವತ್ತಾದ ಭೂಮಿ, ಬಂಜರಾದ ಭೂಮಿ, ಹೀಗೆ. ಇಂಥ ಸಂದರ್ಭದಲ್ಲಿ, ಗೋಚರವಾಗುವ ತತ್ವ, ಪದಾರ್ಥ, ಇತ್ಯಾದಿಗಳಿದ್ದರೆ, ಅಗೋಚರವಾದದ್ದು ಒಂದಿರ ಬಹುದು ಎಂದನಿಸುವುದು ಸಹಜ). ಇದ್ದರೆ ಅದೇನು? ಅದರ ಸತ್ಯಾಸತ್ಯದ ನಿರ್ಣಯವನ್ನು ಹೇಗೆ ಮಾಡುವುದು? ಇಂತಹ ಪ್ರಶ್ನೆಗಳು ಮನುಷ್ಯನನ್ನು ಅನಾದಿಕಾಲದಿಂದಲೂ ಕಾಡುತ್ತ ಬಂದಿದೆ.
ಪ್ರತಿಯೊಂದು ಜನಾಂಗದಲ್ಲೂ ಇದರ ಬಗ್ಗೆ ಆಲೋಚನೆ ನಡೆದಿದ್ದು, ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಆ ತತ್ವವನ್ನು ಅರಿಯಲು ಪ್ರಯತ್ನಿಸಿದ್ದಾರೆ.