ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ?
ನಾವರಿಯಲಾರದೆಲ್ಲದರೊಟ್ಟು ಹೆಸರೆ? ||
ಕಾವನೋರ್ವನಿರಲ್ಕೆ ಜಗದ ಕಥೆಯೇಕಿಂತು?
ಸಾವು ಹುಟ್ಟುಗಳೇನು? - ಮಂಕುತಿಮ್ಮ
ಜೀವನದ, ಪ್ರಪಂಚದ ಬಗ್ಗೆ ಮನಸ್ಸು ಹೊಂದಿರುವ ಕುತೂಹಲಕ್ಕಿಂತ, ಪಾರಲೌಕಿಕ ತತ್ವದ ಬಗೆಗಿನ ವಿಸ್ಮಯ, ಶಂಕೆ, ನಂಬಿಕೆಗಳು ಹೆಚ್ಚು ತುಂಬಿದೆ ಮಾನವನ ಹೃದಯದಲ್ಲಿ. ನಾವು ದೇವರೆಂದು ನಂಬಿರುವ 'ಅದು' ಏನು? ಕಗ್ಗತ್ತಲೆಯ ಗವಿಯೆ? ಅಥವಾ ಮಾನವನು ತಿಳಿಯಲಾಗದ ಅದೆಷ್ಟೋ ವಿಷಯಗಳಿಗೆ(ವಿಧಿ, ಕಾಲ, ಹಣೆ ಬರಹ) ಇಟ್ಟಿರುವ ಹೆಸರೇ? ನಮ್ಮ ನಂಬಿಕೆಯಂತೆ, ದೇವರಿದ್ದರೆ, ಅವನು ಜಗತ್ತನ್ನು ಕಾಯುವವನೇ ಆಗಿದ್ದರೆ, ಜಗವು ಈಗಿನ ಪರಿಸ್ಥಿತಿಯಲ್ಲಿ ಏಕಿದೆ? ನಾವು ಕಾಣುವ, ಕಂಡು ಹೆದರುವ ಈ ಸಂಸಾರದ ಎರಡು ಸೂತ್ರಗಳಾದ ಈ ಹುಟ್ಟು, ಸಾವು ಎಂಬುದು ಏನು?
ಹಲವಾರು ಬಾರಿ ಮನಸ್ಸಿನಲ್ಲಿ ಏಳುವ ಹಲವಾರು ಪ್ರಶೆಗಳು ಇದೇ ಪ್ರಕಾರವಾಗಿರುತ್ತವೆ. ನಮಗೆ ಬರುವ ಕಷ್ಟ ಕೋಟಲೆಗಳು, ಜಗತ್ತಿನಲ್ಲಿ ನಾವು ಕಾಣುವ ಅನ್ಯಾಯಗಳು, ಪ್ರಕೃತಿ ವಿಕೋಪಗಳು, ಮುಂತಾದವನ್ನು ನೋಡಿದಾಗ ಮನಸ್ಸು ದುಗುಡಗೊಳ್ಳುತ್ತದೆ. ದೇವರು ನಿಜವಾಗಿಯೂ ಇರುವನೇ ಎಂಬಂತಹ ಸಂದೇಹಗಳು ಮೂಡುತ್ತವೆ. ಸಂಸಾರದಲ್ಲಿ ನಾವು ಕಾಣುವ ನೋವುಗಳಿಗೆ ತಳಹದಿಯನ್ನು ನೀಡುವ, ಜನನ - ಮರಣಗಳ ರಹಸ್ಯವನ್ನು ಅರಿಯಲು ಮನಸ್ಸು ತುಡುಕುತ್ತದೆ.
- ಪ್ರವೀಣ್ ಶಿವಶಂಕರ್