ಜನವರಿ ೩೧ - ವರಕವಿಯೆಂದೇ ಪ್ರಖ್ಯಾತರಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮ ದಿನ. ಅವರ ೧೧೦ನೆಯ ಜಯಂತಿಯ ಪ್ರಯುಕ್ತ ಅವರ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ನಿಮ್ಮ ಮುಂದಿರಿಸುವೆವು - ಸಂ
ಮುಂದೆ ಓದಿ
ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ! ನಿನಗೆ!
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ ----- ('ಎನ್ನ ಪಾಡೆನಗಿರಲಿ' - ನಾದಲೀಲೆ ಕವನ ಸಂಗ್ರಹ)
* * * *
ಬರಲಿಹ ಕಾಯಿಯ ಪಾಡಿನ ರುಚಿಯೂ
ಇದರೊಳು ಮಡಗಿಹುದು
ನಾಳಿನ ಹಣ್ಣಿನ ರಸವಿಲ್ಲಿಯ ಮಕ-
ರಂದದೊಳಡಗಿಹುದು
ಕವನ ಕೋಶದೀ ಕಮಲ ಗರ್ಭದಲಿ
ಪರಾಗವೊರಗಿಹುದು ---- ('ಪರಾಗ' - ಸಖೀಗೀತ ಕವನ ಸಂಗ್ರಹ)
* * * *
ಮೇಲಿನ ಕವನದ ತುಣುಕುಗಳಿಂದ ಅಂಬಿಕಾತನಯದತ್ತರ ಕವನಗಳಲ್ಲಡಗಿರುವ ರಸಶಕ್ತಿಯ ಅನುಭವವಾಗದಿರುವುದು ಸಾಧ್ಯವೇ? ಮೊದಲನೆಯದರಲ್ಲಿ ತಾವು ಬರೆದ ಕವನಗಳನ್ನು ಸಹೃದಯ ಸಾಹಿತ್ಯಾಸಕ್ತ ರಸಿಕರಿಗೆ ನೀಡುವ ನಿಲುವಿದ್ದರೆ, ಎರಡನೆಯದರಲ್ಲಿ ಕವನದ ತಿರುಳು, ಅದರಲ್ಲಿ ಗುಪ್ತವಾಗಿ ಮನೆಮಾಡಿದ, ಕವನದಲ್ಲಿ ರಸೋತ್ಪಾದನೆಗೆ ಕಾರಣವಾಗುವ ಕೆಲವು ಲಕ್ಷಣಗಳನ್ನು ಬೇಂದ್ರೆಯವರು ಸೂಕ್ಷ್ಮವಾಗಿ ಹೇಳಿದ್ದಾರೆ.
ಅವರು ಹುಟ್ಟಿದ್ದು ಜನವರಿ ೩೧, ೧೮೯೬ರಂದು ದಾರವಾಡದಲ್ಲಿ. ನವೋದಯ ಕವಿತ್ರಯರೆಂದೆನಿಸಿಕೊಂಡವರಲ್ಲಿ ಬೇಂದ್ರೆಯವರೊಬ್ಬರು. (ಕುವೆಂಪು ಮತ್ತು ಪು.ತಿ.ನ. ಈ ತ್ರಯಯಲ್ಲಿ ಉಳಿದಿಬ್ಬರು) ಇವರು ರಚಿಸಿದ ಸಾವಿರಾರು ಕವನಗಳು ಬೇರೆ-ಬೇರೆ ಕವನಸಂಗ್ರಹಗಳ ಮೂಲಕ ಪ್ರಕಟವಾಗಿದ್ದು, ಎಲ್ಲ ಸಾಹಿತ್ಯಾಸಕ್ತರ ತೃಷೆಯನ್ನು ತಣಿಸಿದೆ.
'ಗರಿ', 'ಸಖೀಗೀತ', 'ನಾದಲೀಲೆ', 'ಉಯ್ಯಾಲೆ', 'ಗಂಗಾವತರಣ', 'ಅರಳು-ಮರಳು', ಕಾಮಕಸ್ತೂರಿ', 'ಜೀವಲಹರಿ', 'ಉತ್ತರಾಯಣ', 'ನಾಕುತಂತಿ' - ಇವೇ ಮೊದಲಾದುವುಗಳು ಅವರ ಕವನ ಸಂಗ್ರಹಗಳಲ್ಲಿ ಕೆಲವು. ಇತ್ತೀಚೆಗೆ ವಾಮನ ಬೇಂದ್ರೆಯವರು ಅವರ ಸಮಸ್ತ ಸಂಗ್ರಹಗಳನ್ನು 'ಅಂಬಿಕಾತನಯದತ್ತರ ಸಮಗ್ರ ಕಾವ್ಯ - ಔದುಂಬರ ಗಾಥೆ' ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ. ಅವರ ಪ್ರಕಾರ ಬೇಂದ್ರೆಯವರ ಒಟ್ಟು ಕವನ ಸಂಗ್ರಹಗಳು ೩೪. ಅವರ 'ನಾಕುತಂತಿ' ಸಂಗ್ರಹಕ್ಕೆ ೧೯೭೩-೭೪ರ ಸಾಲಿನ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಮೈಸೂರು ವಿ.ವಿ., ಆಚಾರ್ಯ ಹಿಂದೀ ಪ್ರಚಾರ ಸಭ, ಹೈದರಾಬಾದು, ಕರ್ನಾಟಕ ವಿ.ವಿ, ಇವುಗಳಿಂದ ಗೌರವ ಡಾಕ್ಟರೇಟ್ ಪದವಿಗಳು; ೧೯೬೮ರಲ್ಲಿ ಕೇಂದ್ರ ಸರಕಾರದ ಪದ್ಮಶ್ರೀ ಪದವಿ; ೧೯೪೩ರಲ್ಲಿ ಶಿವಮೊಗ್ಗಾದಲ್ಲಿ ನಡೆದ ೨೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ; 'ಅರಳು-ಮರಳು' ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ; - ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದ ಕೀರ್ತಿ ಬೇಂದ್ರೆಯವರದು. ಅವರ ತಾಯಿಯ ಹೆಸರು ಪಾರ್ವತಿಯಾಗಿದ್ದು, ಪಾರ್ವತಿಯ ಇನ್ನೊಂದು ಹೆಸರು 'ಅಂಬಿಕೆ'ಯಯಾಗಿದ್ದು, ಬೇಂದ್ರೆಯವರು ತಮ್ಮನ್ನು ಸಾಹಿತ್ಯವಲಯದಲ್ಲಿ 'ಅಂಬಿಕಾತನಯದತ್ತ'ರೆಂದು ಗುರುತಿಸಿಕೊಂಡರು. ಇದಲ್ಲದೆ, 'ವರಕವಿ', 'ಶ್ರಾವಣದ ಕವಿ', 'ಸಾಧನಕೇರಿಯ ಕವಿ' ಎಂಬಿತ್ಯಾದಿ ನಾಮದೇಯಗಳಿಂದಲೂ ಸಾರಸ್ವತ ಲೋಕ ಅವರನ್ನು ಗೌರವಿಸಿದೆ. ಸಾವಿರಾರು ಕವನಗಳ ಸವಿ ಉಣಿಸಿದ ಅವರು, ಒಂದು ಕವನದಲ್ಲಿ ('ತೇಲಾಡುವಾಗ' - ಗಂಗಾವತರಣ ಕವನ ಸಂಗ್ರಹ) ಹೀಗೆ ಹೇಳಿದ್ದಾರೆ:
ಹಾಸಾದ ಮಿಂಚಿನಿಂದ
ಬೀಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
ಉಳಿದಾವ ನಾಕು ಸಾಲು
ಈ ನುಡಿ ಸಾಹಿತ್ಯಲೋಕಕ್ಕೆ ಸಲ್ಲಿಸಿದ ಸೇವೆಯ ಬಗ್ಗೆ ತಮ್ಮ ನಮ್ರನಿಲುವನ್ನು ವ್ಯಕ್ತಪಡಿಸಿದಂತಿದೆ.
ಅವರು ರಚಿಸಿದ ಹಲವಾರು ಕವನಗಳು ಜನಪ್ರಿಯತೆ ಗಳಿಸಿದೆ; ಬೇಂದ್ರೆ ಕವನಗಳನ್ನು ಬಳಸಿ ಅನೇಕ ಭಾವಗೀತೆ ಆಲ್ಬಮ್‍ಗಳನ್ನು ಹೊರತಂದಿದ್ದಾರೆ, ಮತ್ತೆ ಕೆಲವನ್ನು ಚಲನಚಿತ್ರಗಳಲ್ಲಿಯೂ ಅಳವಡಿಸಿಕೊಂಡಿದ್ದಾರೆ. ಇಂಥ ಕೆಲವು ಹಾಡುಗಳನ್ನು ಇಂದು ಕನ್ನಡ ಆಡಿಯೊ ಅಂತರ್ಜಾಲ ರೇಡಿಯೊ ಕೇಂದ್ರದಲ್ಲಿ ಪ್ರಸಾರವಾಗುವ ವಿಶೇಷ ಕಾರ್ಯಕ್ರಮದಲ್ಲಿ ಕೇಳಬಹುದು. ಬೇಂದ್ರೆಯವರ ಸಾಹಿತ್ಯದಲ್ಲಿ ನಿಮ್ಮ ಆಸಕ್ತಿಯನ್ನು ಹೆಚ್ಚಿಸಲು ಅವರ ಕೆಲವು ಕವನಗಳ ಸಂಪೂರ್ಣ ಸಾಹಿತ್ಯವನ್ನು ಕನ್ನಡಲಿರಿಕ್ಸ್.ಕಾಂನಲ್ಲಿ ಪ್ರಕಟಿಸಿದ್ದೇವೆ. ಆಸಕ್ತರು ಅವುಗಳನ್ನು ಓದಿ, ಇವುಗಳಲ್ಲಿ ನಿಮಗೆ ಮೆಚ್ಚುಗೆಯಾದ ಕವನಗಳನ್ನು ಆಯ್ದು, ಅವುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲೆಂದು ನಿಮ್ಮಲ್ಲಿ ಕೋರುತ್ತಿದ್ದೇವೆ.