ಕಥೆ: ಬೇಂದ್ರೆ ಗುಂಗಿನಲ್ಲಿ - ವಿಕ್ರಮ್ ಹತ್ವಾರ್

ವಿಕ್ರಮ್ ಹತ್ವಾರ್ ವೃತ್ತಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದು, ಅಮೆರಿಕದ ನ್ಯೂಜರ್ಸಿಯಲ್ಲಿ ವಾಸವಾಗಿದ್ದಾರೆ. ಕಥೆಗಳನ್ನಷ್ಟೇ ಅಲ್ಲದೆ ಕವನಗಳನ್ನು ರಚಿಸಿದ್ದಾರೆ. ಕಳೆದ ವಾರವಷ್ಟೇ ಬೇಂದ್ರೆ ಜನ್ಮದಿನದ ವಿಷೇಷ ಲೇಖನಗಳನ್ನು ಓದಿರುವಿರಿ. ಈಗ "ಬೇಂದ್ರೆಯ ಗುಂಗಿನಲ್ಲಿ"ರುವ ವಿಕ್ರಮ್‍ ಅವರ ಈ ಕಥೆಯನ್ನು ಓದಿ, ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಕೋರಿಕೆ - ಸಂ.

ಬೇಂದ್ರೆಯ ಗುಂಗಿನಲ್ಲಿ

'ನೀ ಹಿಂಗ ನೋಡಬ್ಯಾಡ ನನ್ನ
ನೀ ಹಿಂಗ ನೋಡಿದರ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ...'

ನೀವೆಲ್ಲರೂ ಕೇಳಿಯೇ ಇರುತ್ತೀರಿ. ನಾನೂ ಕೇಳಿದ್ದೇನೆ; ಸಾವಿರಾರು ಬಾರಿ. ಮೊದಲ ಬಾರಿಗೆ ಕೇಳಿದ್ದು ನನಗೆ ನಿಚ್ಛಲ ನೆನಪಿದೆ: ಬಹಳ ಹಿಂದೆ ದೂರದರ್ಶನದ ಚಿತ್ರಮಂಜರಿಯಲ್ಲಿ. ಮೊದಲ ಬಾರಿಗೇ ಹಿಡಿಸಿತು. ಅದಾಗಿ ಸುಮಾರು ದಿನಗಳ ಮೇಲೆ ರೇಡಿಯೋದಲ್ಲಿ ಕೇಳಿದೆ. ಮತ್ತೆ ಎಲ್ಲಿಯಾದರು ರೇಡಿಯೋ ಹಾಡುತ್ತಿದ್ದರೆ, ಚಿತ್ರಮಂಜರಿ ಬರುತ್ತಿದ್ದರೆ, ಈ ಹಾಡು ಬರುತ್ತದೋ ಅಂತ ಕಾಯುತಲಿದ್ದೆ. ಹೆಚ್ಚಾಗಿ ನಿರಾಶೆಯೇ ನನ್ನ ಪಾಲಿಗೆ. ಈಗ online music ಇರುವ websiteಗಳಲ್ಲಿ ಹಾಡಿನ ಹೆಸರು ಕೊಟ್ಟು search ಹೊಡೆದರೆ, ಆ ಹಾಡು feed ಆಗಿದ್ದರೆ ದೊರಕಿಬಿಡುತ್ತದೆ, ಮತ್ತೆ ಇಷ್ಟ ಬಂದಾಗೆಲ್ಲ; ಯಾವ ಹೊತ್ತಿನಲ್ಲಿ ಬೇಕಾದರೂ ಕೇಳಬಹುದು. repeat mode ಹಾಕಿ ದಿನವಿಡೀ ಕೇಳುತ್ತ ಕೂರಬಹುದು. ಆದರೆ ಆ ದಿನಗಳಲ್ಲಿ ಆ ಹಾಡಿಗಾಗಿ ಪರಿತಪಿಸುತ್ತಿರುವಾಗ ಯಾವುದಾದರು ಸಮಾರಂಭದಲ್ಲಿಯೊ, ಆರ್ಕೆಷ್ಟ್ರಾದಲ್ಲಿಯೋ (ಹತ್ತು-ಹದಿನೈದು ವರುಷದ ಹಿಂದಾಗಿದ್ದರೆ. ಈಗ ಅಂತಹ ಹಾಡುಗಳು ಬರುವ ಸಂಭವವೇ ಇಲ್ಲ), ಸ್ನೇಹಿತನ ಮನೆಯಲ್ಲೋ, ಊಟಕ್ಕೆ ಕೂತಾಗಲೊ, ಜಪ ಮಾಡುವಾಗಲೊ, ಇನ್ಯಾವಾಗಲೊ ಕಿವಿಗೆ ಬಿದ್ದಾಗ ಉಂಟಾಗುತ್ತಿದ್ದಂತಹ ಖುಷಿ ಈಗ ಮತ್ತೆ ಬರುತ್ತದೆಯೇ?. ಅದು ಕಳೆದು ಹೋಗಿದ್ದ; ಅಪ್ಪ ಕೊಡಿಸಿದ ಒಲವಿನ ಆಟಿಕೆಯೊಂದನ್ನ ಹುಡುಕುತ್ತಿರುವಾಗ, ಇದ್ದಕ್ಕಿದ್ದ ಹಾಗೆ ಯಾವುದೋ ಒಂದು ಮೂಲೆಯಲ್ಲಿ ದೊರೆತು ಕೈಗೆತ್ತಿಕೊಂಡು ಹಿಗ್ಗುವ ಮಕ್ಕಳ ಮನಸ್ಸಿನಲ್ಲಿ ಉಂಟಾಗುವಂತಹ ಉಲ್ಲಾಸ. ಬೇಕಾದಾಗ ಸಿಗುವ ವಸ್ತುವನ್ನು ಮನಸ್ಸು ಧೀರ್ಘವಾಗಿ ಹೊತ್ತುಕೊಂಡಿರುವುದಿಲ್ಲ. ಆ ವಸ್ತುವಿನ ಬಗೆಗಿನ ಭಾವ ತೀವ್ರತೆ ಕ್ರಮೇಣ ಕ್ಷೀಣಿಸುತ್ತದೆ. ಹಲವು ಬಾರಿ ಮರೆತುಬಿಡುವ ಸಂಭವವೂ ಇದೆ- ನಮಗೆ ಅದರ ಲೌಕಿಕ ಅವಶ್ಯಕತೆ ಇಲ್ಲದೇ ಇದ್ದರೆ.

ಈಗಲೂ ನೆಚ್ಚಿನ ಹಾಡು ಇದ್ದಕ್ಕಿದ್ದ ಹಾಗೆ ಕಿವಿಗೆ ಬಿದ್ದರೆ ನಾನು ಹುಚ್ಚೆದ್ದು ಹೋಗುತ್ತೇನೆ. ಆದರೆ ಅಲ್ಲಿ ನಿರೀಕ್ಷೆಯ ತಪವಿಲ್ಲ. ಸಿಗುವುದೋ ಇಲ್ಲವೋ ಎನ್ನುವ ಹತಾಶೆ ಹೊತ್ತು, ಎಂದಾದರು ಸಿಕ್ಕೇ ಸಿಗುತ್ತದೆ ಎನ್ನುವ ಆಶಾವಾದದೊಡನೆ ಸಂಚರಿಸುವ ಮನಸ್ಸಿಗೆ ವರವಾಗುವ ಗೀತೆಗಳು ಬಹಳ ಕಮ್ಮಿ. ಅಂತಹ ಹಾಡುಗಳ ನನ್ನ ಪಟ್ಟಿಯಲ್ಲಿ ಬೇಂದ್ರೆಯವರ ಈ ಹಾಡೂ ಸೇರಿದೆ. 'ಹುಣಿಮೆ ಚಂದಿರನ ಹೆಣ' ಎನ್ನುವ ಮಾತೇ ಸಾಕು ಈ ಹಾಡು ನಿಮ್ಮನ್ನು ಕಾಡಲು. ಕವಿತೆಯ ಯಾವ ಹಿನ್ನಲೆಯೂ ಕೊಡದೆ ಸುಮ್ಮನೆ ಹಾಡು ಕೇಳಿಸಿಬಿಟ್ಟರೆ: ಬೇಂದ್ರೆಯವರ ಅನೇಕ ಕವನಗಳು ನನ್ನಂತವನ ಪಾಲಿಗೆ ಕಬ್ಬಿಣದ ಕಡಲೆಯೇ. ಸ್ಥೂಲವಾಗಿ ಒಂದು ಚಿತ್ರಣ ದೊರಕುವುದೇ ಕಷ್ಟ ಇನ್ನು ಪದ ಬಳಕೆಯ ಉದ್ದೇಶ, ಪದ್ಯಗಳ ಪರಸ್ಪರ ಸಂಬಂಧ ಮಿಕ್ಕ ವಿಷಯಗಳೆಲ್ಲ ಅರ್ಥವಾಗುವ ಮಾತು ಬಹಳ ದೂರ.

ಯಾವ ಹಿನ್ನಲೆ ಗೊತ್ತಿರದಿದ್ದರೂ, ರಂಗರಾಯರು ಕವಿತೆಗೆ ತಕ್ಕ ಸಂಗೀತ ಒದಗಿಸಿದನ್ನು ಕೇಳಿದಾಗ, ಈ ಹಾಡು ನಿಜಕ್ಕೂ ಚೆನ್ನಾಗಿದೆಯಲ್ಲವೇ? ಅಂತನಿಸುತ್ತದೆ. ಆದರೆ ನನಗೆ ಅದಲ್ಲ ಅನಿಸಿದ್ದು. ಸ್ನೇಹಿತನೊಬ್ಬ ತಿಳಿಸಿದ್ದ 'ಈ ಹಾಡನ್ನು ಬೇಂದ್ರೆಯವರು ತಮ್ಮ ಮಗು ಸತ್ತಾಗ, ಅಳದೆ ದುಗುಡವನ್ನೆಲ್ಲ ಒತ್ತಿಟ್ಟುಕೊಂಡು ತಮ್ಮನ್ನೇ ದಿಟ್ಟಿಸುತ್ತಿದ್ದ ಪತ್ನಿಯನ್ನು ಕುರಿತು ಹಾಡಿದರಂತೆ!'. ಈ ಹಿನ್ನಲೆ ನಿಮಗೂ ಗೊತ್ತಿರಬಹುದು. ಆ ತಾಯಿಯ ನೋಟ ಹೇಗಿದ್ದಿರಬಹುದು?. ಶಾಂತ ಪ್ರವಾಹವೇ? ಈಟಿ ಇರಿಯುವಂತಹುದೇ? ಇನ್ನೊಂದು ಕ್ಷಣ ನೋಡಿದರೆ ಸುಟ್ಟುಬಿಡುವಂತಹ ಜ್ವಾಲೆಯೇ? ಇವೆಲ್ಲಕ್ಕಿಂತಲೂ ತೀಕ್ಷ್ಣವಾದ ಶೂನ್ಯ ಭಾವವೇ?. ಹೌದು ಶೂನ್ಯ ಭಾವವೇ ಇರಬೇಕು. ಅದಕ್ಕೆ 'ಅತ್ತಾರೆ ಅತ್ತು ಬಿಡು ಹೊನಲು ಬರಲಿ ನಕ್ಕ್ಯಾಕೆ ಮರಸತೀ ದುಃಖ' ಅಂತ ಹಾಡಿದ್ದು. ನಿರ್ಲಿಪ್ತ ನೋಟದೊಡನೆ ವ್ಯಾಕುಲದ ಕಿರುನಗೆಯೊಂದು ಸೇರಿ ಬಿಟ್ಟರೆ ಎದುರಿನವನ ಹೃದಯ ಕುಸಿದು ಬೀಳುತ್ತದೆ. ಅಂತಹ ನೋಟ ಎದುರಿಸುವಾಗ, ಅದಕ್ಕೂ ಮಿಗಿಲಾಗಿ ಮನೆಯಲ್ಲಿ ಮಗುವಿನ ಹೆಣ ಬಿದ್ದಿರುವಾಗ ಯಾವ ಮನುಷ್ಯನಿಗಾದರು ಹಾಡು ಕಟ್ಟುವ ಚೈತನ್ಯವಿರುತ್ತದೆಯೇ?. ಅದ್ಯಾರು ಕವಿಗಳು ಜಗತ್ತಿನ ಸೌಂದರ್ಯವನ್ನು ಹಾಡಿದವರು? ಕಲೆಯನ್ನು ಕೊಂಡಾಡಿದವರು? ಬದುಕನ್ನು ಪ್ರೀತಿಸಿದವರು? ಪ್ರಕೃತಿಯನ್ನು ಆರಾಧಿಸಿದವರು? ಶೋಷಿತರನ್ನು ಬಡಿದೆಬ್ಬಿಸಿದವರು? ಸಮಾಜವನ್ನು ತಿದ್ದಿ ಕಟ್ಟಿದವರು? ಮನುಷ್ಯ ಸಂಬಂಧಗಳ ಸೂಕ್ಷ್ಮವನ್ನು ಎಳೆ ಎಳೆಯಾಗಿ ಬಿಡಿಸಿಟ್ಟವರು? ಶೃಂಗಾರದ ರಸಪಾಕ ಉಣಿಸಿದವರು? ದೇವರನ್ನು ಹುಡುಕಹೊರಟವರು? ಅದ್ಯಾರು ಕವಿಗಳು?. ಕಂಡವರ ಹೆಣ ಕಂಡು ತತ್ವಜ್ಞಾನ ಮಾತನಾಡುವುದು ಸುಲಭ. ಯಾವ ಕವಿಗಾದರು ತನ್ನವರ, ಅಲ್ಲ, ತನ್ನ ಮಗುವಿನ ಚಿತೆ ಆರುವ ಮುನ್ನ ಕವಿತೆ ಹೊಳೆಯಲು ಸಾಧ್ಯವೇ? ಅಸಲು ಬೇಂದ್ರೆ ಕವಿಯೇ? ಅವರನ್ನು ಕವಿಯೆಂದು ಕರೆದು ಅವಮಾನಿಸದಿರಿ. ಬೇಂದ್ರೆ ಮಹಾನ್ ಚೇತನ!.

ನೀವು ಸುಖೀಪುರುಷರೇ? ಸದಾ ನಗುತ್ತಿರುವವರೆ; ಇರ ಬಯಸುವವರೆ? ಹಾಗಾದರೆ ಈ ಹಾಡು ಕೇಳಬೇಡಿ. ನಿಮಗೆ ಸುಖದ ಅರ್ಥ ತಿಳಿಯಬೇಕೆ? ಈ ಹಾಡು ಕೇಳಿ. ಈ ಹಾಡು ಮನಸ್ಸನ್ನು ಹಿಂಡಿಹಾಕುತ್ತದೆ. ಕೇಳಿದಾಗ ಕಣ್ಣಿನಿಂದ ಎರಡು ಹನಿ ಜಿನುಗದಿದ್ದರೆ, ನೀವು ಮನುಷ್ಯರೆಂಬ ನಂಬಿಕೆ ನಿಮಗೇ ಹೊರಟುಹೋಗುತ್ತದೆ. ಏನೂ ಬರೆಯದೆ ಇರುತ್ತಿದ್ದರೂ ಬೇಂದ್ರೆ ನನಗೆ ಇಷ್ಟವಾಗುತ್ತಿದ್ದರು.

ಬೇಂದ್ರೆಯ ಬಗ್ಗೆ ಬರೆಯುತ್ತಿರುವಾಗಲೆ ಫೋನು ರಿಂಗಿಣಿಸಿದ್ದು ಕೇಳಿ ಪ್ರಶಾಂತ್ ಹಾಲ್ ಗೆ ಬಂದ. ಮೊಬೈಲ್ ಆಫ಼್ ಮಾಡುವುದು ಮರೆತಿದ್ದ. ಮೊಬೈಲು ಅಂಡು ಹಾರಿಸುತ್ತ ಸದ್ದು ಮಾಡುತ್ತಿತ್ತು. ಮನೆಯಲ್ಲಿ ಯಾರೂ ಇಲ್ಲದ್ದು ನೆನಪಾಗಿ ಮೊಬೈಲಿನ ಸದ್ದು ಸಹಿಸಲಾರದೆ ಕೈಗೆತ್ತಿಕೊಂಡ.

'ಹಲೋ'
'ಹಲೋ, ಪ್ರಶಾಂತ್?'
'ಹೌದು ನೀವ್ಯಾರು?'
'ನಾನು ಹಯವದನ ಮಾತಾಡ್ತಿರೋದು'
'ಹಾಂ...'
'ಬೆಳಗ್ಗೆ ನಿಮ್ಮಲ್ಲಿಗೆ ಬಂದಿದ್ದೆ. ನೀನು ಇರಲಿಲ್ಲ. ನಿನ್ನ ತಂದೆಯೊಟ್ಟಿಗೆ ಮಾತಾಡಿದೆ.'
'ಹಾಂ ಹೇಳಿದ್ರು. ಅದು, ನೀವೊಂದು ಕೆಲ್ಸ ಮಾಡಿ, ನನ್ನ e-mail idಗೆ ನಿಮ್ಮ ಮಗನಿಗೆ resume ಕಳಿಸೋಕೆ ಹೇಳಿ'
'ಆಯ್ತು. ಅವನು ಈವತ್ತು ಬೆಳಗ್ಗೆ ಕಳ್ಸಿದಾನೆ ಅನ್ಸುತ್ತೆ. ನೋಡು, ಸ್ವಲ್ಪ ಪ್ರಯತ್ನ ಪಡು. ಕಾಲೇಜು ಮುಗಿಸಿ ನಾಲ್ಕು ತಿಂಗಳಾಯ್ತು'
'ನೋಡ್ತೀನಿ. ನಿಮ್ಮ ಮಗನದ್ದು percentage ಎಷ್ಟಿದೆ?'
'61 percent. ಸ್ವಲ್ಪ ಕಮ್ಮಿಯಾಯ್ತು' ಸಂಕೋಚದ ದನಿಯಿತ್ತು.
ಸ್ವಲ್ಪ ಏನು ಪೂರ್ತಿ ಕಮ್ಮಿಯಾಗಿದೆ ಎಂದುಕೊಂಡ. ಆದರೂ ಏನೂ ಹೇಳದೆ 'ಸರಿ ನೋಡೋಣ. ಈ ಸಲ ನಾನು interview ತಗೊಳ್ಳೋಕೆ ಹೋಗ್ತಿಲ್ಲ. ನಾನು ಪ್ರಯತ್ನ ಪಡಬಹುದು ಅಷ್ಟೆ'
'ಏನೋ ಮನಸ್ ಮಾಡಪ್ಪ. ಅವನಿಗೊಂದು ಕೆಲಸ ಅಂತ ಸಿಕ್ಕಿದ್ರೆ ನಮಗೆ ನೆಮ್ಮದಿ' ನಿರಾಸೆಯಿಂದ ಹೇಳಿದರು.
'interview ಯಾವತ್ತು?'
'ನಾಡದ್ದು ಬುಧವಾರ'
'ಈವತ್ತು ಭಾನುವಾರ. ಸರಿ, ನಾಳೆ ನೋಡ್ತೀನಿ ಯಾರದ್ರು ಗೊತ್ತಿರೋರು ಇದ್ರೆ ಹೇಳ್ತೀನಿ. ನನ್ನನ್ನ ನಂಬ್ಕೊಂಡು ಕೂರಬೇಡಿ. interview ನಲ್ಲಿ ಚೆನ್ನಾಗಿ ಮಾಡೋಕೆ ಹೇಳಿ. ನನಗೆ ಬುಧವಾರ ರಾತ್ರಿ, interview ಮುಗಿದ ಮೇಲೆ ಫೋನ್ ಮಾಡಿ. ಎನಾಯ್ತು ಅಂತ ತಿಳಿಸ್ತೀನಿ. ಅಲ್ಲಿವರ್ಗೂ ಯಾರೂ ಗೊತ್ತಿಲ್ಲ ಅಂದ್ಕೊಂಡೇ prepare ಆಗೋಕೆ ಹೇಳಿ'
'ಆಯ್ತಪ್ಪ. ಇಡ್ತೀನಿ'

ಹಯವದನ ರಾಯರು ಬಹಳ ಹಿಂದಿನ ಪರಿಚಯ; ದೂರದ ಸಂಬಂಧ. ಬೆಳಗ್ಗೆ ಬಂದು ಸುಮಾರು ಹೊತ್ತು ಕೂತಿದ್ದು, ನಾನು ಬಾರದಿದ್ದು ಕಂಡು ಹೋಗಿದ್ದರೆಂದು ಅಪ್ಪ ಹೇಳಿದ್ದರು. ಮಗನ ಕೆಲಸದ ವಿಚಾರವಾಗೇ ಬಂದಿದ್ದರು. ಪ್ರತಿ ಭಾನುವಾರ ಬೆಳಗ್ಗೆ ಕ್ರಿಕೆಟ್ ಆಡೋಕೆ ಹೋಗೋದು ರೂಢಿ, ಇವತ್ತು ಬರೋದು ಸ್ವಲ್ಪ ತಡ ಆಗಿತ್ತು. ಅರವತ್ತು ಪರ್ಸೆಂಟ್ ತೆಗೆದವನಿಗೆ ಕೆಲಸ ಕೊಡಿ ಅಂತ ಹೇಗೆ ಕೇಳುವುದು?. ಇದೊಳ್ಳೆ ಫಜೀತಿ ಆಯ್ತು, ಒಂದು ಎಪ್ಪತ್ತು ಪರ್ಸೆಂಟ್ ಆದರು ಇದ್ದಿದ್ದರೆ. ಈ ಅಪ್ಪನಿಗೆ ಬೇರೆ ಬುದ್ಧಿಯಿಲ್ಲ. ನನ್ನ ಮಗಾನೂ interview ತಗೊಳ್ಳೋಕೆ ಹೋಗ್ತಾನೆ, ಅವನಿಗೆ ಹೇಳಿದ್ರೆ ಕೆಲ್ಸ ಸಿಕ್ಕಿದ ಹಾಗೇ ಅಂತ ಹೇಳಿಟ್ಟಿದ್ದಾರೆ ಎಂದುಕೊಳ್ಳುತ್ತ ಟಿ.ವಿ ಆನ್ ಮಾಡಿದ. ಅವಸರದ ಜಪದಲ್ಲಿ ತುಳಸೀಮಣಿಯನ್ನು ಸರಸರನೆ ಎಣಿಸುವಂತೆ ಚಾನೆಲ್ ಚೇಂಜ್ ಮಾಡಿದ. ಯಾವುದೂ ಹಿಡಿಸದೆ, ಟಿ.ವಿ ಆರಿಸಿ, ರೂಮಿಗೆ ಹೋಗಿ ಬೇಂದ್ರೆಯ ಕುರಿತು ಬರೆದಿದ್ದನ್ನು ಒಮ್ಮೆ ಓದಿಕೊಂಡು ಎನ್ನೆರಡು ಕವಿತೆಗಳ ಮರ್ಮ ಬರೆಯಲು ಕುಳಿತ. ಕೊಂಚ ಸಮಯದ ನಂತರ ಡೋರ್ ಬೆಲ್ ಸದ್ದಾದದ್ದು ಕೇಳಿ ಬಾಗಿಲು ತೆಗೆದ. ಮನೆಯವರೆಲ್ಲ ಯಾರದೋ ಮದುವೆಯ receptionನಿಂದ ಮರಳಿದ್ದರು.

'ಏನು ಜೋರಾಗಿತ್ತ reception?' ಒಳಬರುತ್ತಲೇ ಕೇಳಿದ
'ಹೋ, ಸಿಕ್ಕಾಪಟ್ಟೆ ಜನ. ತುಂಬಾ ಚೆನ್ನಾಗಿತ್ತು, ನೀನೂ ಬರಬಹುದಾಗಿತ್ತು. ನಿಂದು ಊಟ ಆಯ್ತಾ?' ಪ್ರಶಾಂತನ ತಾಯಿ ಕೇಳಿದರು.
'ಆಯ್ತು. ಸ್ವಲ್ಪ ಕೆಲ್ಸ ಇತ್ತಮ್ಮ, ಇಲ್ದಿದ್ರೆ ನಾನೂ ಬರ್ತಿದ್ದೆ'
'ಏನ್ ಮಹಾ ಕೆಲ್ಸಾನೊ ರಾಯರಿಗೆ?' ಟಿ.ವಿ ಆನ್ ಮಾಡಿ ಪ್ರಶಾಂತನ ತಂದೆ ಕೇಳಿದರು 'ಆಮೇಲೆ, ಹಯವದನ ರಾಯರು ಫೋನ್ ಮಾಡಿದ್ರಾ?'
'ಹ್ಞುಂ ಮಾಡಿದ್ರು' ಎನ್ನುತ್ತ ರೂಮಿನೊಳಗೆ ನಡೆದ.
'ಏನ್ ಹೇಳ್ದೆ?'
'ಏನ್ ಹೇಳೋದು? ಅರವತ್ತು ಪರ್ಸೆಂಟ್ ಇಟ್ಕೊಂಡು ಏನ್ ಮಾಡೋದು? ನಾನ್ ಹೇಗಿದ್ರು interivew panel ನಲ್ಲಿ ಇಲ್ಲ'
'ಹಾಗ್ ಹೇಳ್ಬೇಡ್ವೋ. ನಿಂಗೆ ಗೊತ್ತಿರೋರು ಯಾರದ್ರು ಇದಾರ ನೋಡು. ಹಯವದನ ರಾಯರ ಪರಿಸ್ಥಿತಿ ನಿಂಗೂ ಗೊತ್ತು'
'ಯಾರೂ ಇದ್ದಂಗಿಲ್ಲ. ನೋಡೋಣ' ಎಂದು ಬರವಣಿಗೆಯಲ್ಲಿ ಮಗ್ನನಾದ.

ಎರಡು ದಿನದ ಹಿಂದಷ್ಟೆ ಆಫೀಸಿನ ಸಹೋದ್ಯೋಗಿಯೊಬ್ಬ interview panel ನಲ್ಲಿ ಇರೋದಾಗಿ ಹೇಳಿದ್ದು ಜ್ಞಾಪಕಕ್ಕೆ ಬಂತು. ಆದರೆ ಅವನನ್ನ ಏನಂತ ಕೇಳೋದು?. ನಿಮ್ಮವರು ಯಾರದರು ಇದ್ದಾರ? ಅಂತ ಅವನೇ ಕೇಳಿದ್ದ. ಯಾರೂ ಇಲ್ಲ ಅಂದಿದ್ದೆ. ಆಗಿನ್ನು ಹಯವದನ ರಾಯರು ಏನೂ ಕೇಳಿರಲಿಲ್ಲ. ನಾಳೆ ಹೇಳಿದರೂ ಆಗುತ್ತೆ. ಶಿಫಾರಸ್ಸು ಮಾಡುವುದು, ನಕಲಿ experience, ನಕಲಿ certificates ಮಾಡಿಸೋದು, ಇವೆಲ್ಲ ಇಲ್ಲಿ ಮಾಮೂಲು. ಹಾಗೆ ಮಾಡಿಬಂದವರು ನನ್ನ ಪರಿಚಿತರೇ ಅನೇಕರಿದ್ದಾರೆ. ಅಂತವರನ್ನ ಕಂಡರೆ ಹೇಸಿಗೆ. ಅಂತವರೆನ್ನಲ್ಲ ಮೊದಲು ಹುಡುಕಿ ಹುಡುಕಿ ಕೆಲಸದಿಂದ ತೆಗೆದುಹಾಕಬೇಕೆಂದು ನಾನೇ ಎಷ್ಟೋ ಬಾರಿ ಹೇಳಿದ್ದೇನೆ- ಸ್ನೇಹಿತರ ಮುಂದೆ. ಇಂತವರು; ತೀರಾ ಕಡಿಮೆ ಯೋಗ್ಯತೆಯವರು ನನಗೆ ಸಮನಾಗಿ ಅಥವಾ ಇನ್ನೂ ಹೆಚ್ಚು ಸಂಬಳ ಪಡೆಯುವುದನ್ನು ಹೇಗೆ ಸಹಿಸುವುದು? ಆದರೆ ಇದಕ್ಕೂ ಹಯವದನ ರಾಯರಿಗೂ ಏನು ಸಂಬಂಧ? ಅವರು ಯಾವುದೇ ಮೋಸ ಮಾಡುತ್ತಿಲ್ಲ. ಅಲ್ಲದೆ ಹುಡುಗ ಬುದ್ಧಿವಂತನಿರಬಹುದಲ್ಲ?. ಇವನಿಗೆ ಕೆಲಸ ಕೊಡಲು ಹೇಳಿದರೆ ತನಗೇನೂ ತೊಂದರೆಯಿಲ್ಲ, ನಾನೇನು ಸಣ್ಣವನಾಗುವುದಿಲ್ಲ, ಇವೆಲ್ಲ ಕಾಮನ್ ತಾನೆ. ಆದರೆ ಮನಸ್ಸು ಯಾಕೋ ಹಿಂಜರಿಯುತ್ತಿದೆ. ಇದು ಅಸೂಯೆಯೇ? ನಾನು ಬೇರೊಬ್ಬರಿಗಿಂತ ಹೆಚ್ಚು ಯೋಗ್ಯ ಆದರೂ ಅವರಿಗಿಂತ ಕಡಿಮೆ ಸಂಬಳ ಎನ್ನುವ ಹತಾಶೆಯೆ? ಇರಲಾರದು. ಎರಡು ತಿಂಗಳ ಹಿಂದೆ ನಮ್ಮ ಪೈಕಿಯ ಹುಡುಗನೊಬ್ಬನನ್ನು ನಾನೇ ಸೆಲೆಕ್ಟ್ ಮಾಡಿದ್ದೆ. ಅವನಿಗೆ 65 percent, ಹುಡುಗ ಬುದ್ಧಿವಂತನೂ ಇದ್ದ. ಅಥವಾ ಎಲ್ಲರೂ ಬಂದು ಕೆಲಸ ಕೊಡಿಸಲು ಕೇಳಿ ಕೇಳಿ ರೋಸಿಹೋಗಿದ್ದೇನೆಯೇ?. ಅಲೋಚನೆ ಮಾಡ ಮಾಡುತ್ತಲೆ ಮಬ್ಬು ಬಂದಂತಾಗಿ ನಿದ್ರೆಹೋದ.

* * *

ಬೆಳಗ್ಗೆ ಸ್ನಾನ ಮುಗಿಸಿ ಹೊರಬಂದಾಗ ಬೈಕು ಸರ್ವೀಸಿಗೆ ಕೊಟ್ಟದ್ದು ನೆನಪಾಗಿ, ಇಂದು ಬಸ್ಸು ಹಿಡಿಯಬೇಕು, ಎಂಟು ಘಂಟೆಗೆ ಅಂದುಕೊಂಡು ಆತುರಾತುರವಾಗಿ ರೆಡಿಯಾಗಿ ಬಸ್ ಸ್ಟಾಪಿಗೆ ಬಂದ. ಎರಡು ನಿಮಷದೊಳಗೆ ಬಸ್ಸು ಬಂದು, ಹತ್ತಿಕೊಂಡು ಮಧ್ಯದಲ್ಲೊಂದು ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತ.

'ಹಯವದನ ರಾಯರಿಗೆ ಸಬೂಬು ಹೇಳುವುದೂ ಕಷ್ಟವಲ್ಲ. ಗೊತ್ತಿರುವವರು ಯಾರೂ ಇಲ್ಲ ಅಂತ ಹೇಳಿಬಿಡಬಹುದು. ಹೇಗಿದ್ದರು interview ಗೆ ಕರೆದಿದ್ದಾರೆ. ಯೋಗ್ಯತೆಯಿದ್ದರೆ ಕೆಲಸ ಸಿಗುತ್ತೆ ಇಲ್ಲದಿದ್ದರೆ........ಇಲ್ಲದಿದ್ದರೆ, ಕೆಲಸ ಸಿಗದಿದ್ದರೆ?' ಕಿಟಕಿಯಾಚೆ ಕುರುಡು ನೋಟ ನೋಡುತ್ತಿದ್ದವನು ಇತ್ತ ತಿರುಗಿದ 'ಲೇಖನ ಈವತ್ತೇ ಪೋಸ್ಟ್ ಮಾಡಬೇಕು. ಮಧ್ಯಾಹ್ನ ಬಿಡುವು ಮಾಡಿಕೊಂಡು ಹೋದರಾಯಿತು' ಎಂದುಕೊಂಡು ಕಣ್ಮುಚ್ಚಿದ. ನಿದ್ದೆ ಬರುವ ಹಾಗಿರಲಿಲ್ಲ. ಕಣ್ಣ ಮುಂದೆ ಹಯವದನರಾಯರ ಚಿತ್ರವೇ ಬರುತ್ತಿತ್ತು. ಇಸ್ತ್ರಿ ಇರದ ಬಟ್ಟೆ, ಮೊಣಕೈವರೆಗೂ ತೋಳು ಮಡಿಚಿದ ಅಂಗಿ. ದಪ್ಪದ ಕನ್ನಡಕದ ಒಂದು ಕಡ್ಡಿ ಬೆಂಡಾಗಿದೆ. ತುಸು ಉಬ್ಬು ಹಲ್ಲು, ಹುಲ್ಲು ಮೀಸೆ. ಹೆಗಲಿಗೊಂದು ಚೀಲ. ಬಣ್ಣ ಮಾಸಿದ ಬೆಲ್ಟಿನ ಕೈಗಡಿಯಾರದ ಗಾಜು ಯಾವ ಶತಮಾನದ್ದೋ?. ಚಪ್ಪಲಿಗಳು ಹಪ್ಪಲದ ತೆಳುವಿಗೆ ಬಂದಿದೆ.

'ಸಣ್ಣದೊಂದು ಗೂಡಂಗಡಿಯಂತಹ ಅಂಗಡಿಯಲ್ಲಿ ಚಿಕ್ಕಿ, ಕೊಬ್ಬರಿ ಮಿಠಾಯಿ, ಚಾಕಲೇಟು, ಬಾಳೇಹಣ್ಣು, ಸಿಗರೇಟು, ಬಿಸ್ಕತ್ತಿನ ಪೊಟ್ಟಣ ಮಾರಿಕೊಂಡು, ಜೊತೆಗೆ L.I.C ಏಜೆಂಟಾಗಿ ದುಡಿಯುತ್ತಿದ್ದರು. ಮಿಕ್ಕ ಏಜೆಂಟೆರ ಹಾಗೆ 'ಲಾಭ ಕಮ್ಮಿ ಇದ್ರೂ This is one of the very old and best scheme. ಒಬ್ಬ ಮನುಷ್ಯನಿಗೆ ಬೇಕೇ ಬೇಕಾದ್ದು- ಒಂದು ಮದುವೆ, ಒಂದು L.I.C policy' ಎನ್ನುವ ಬಣ್ಣಬಣ್ಣದ ಮಾತಾಡಿ, ಪಾಲಿಸಿ ಗಿಟ್ಟಿಸಿಕೊಳ್ಳುವ ಚಾಕಚಕ್ಯತೆ ಅವರಿಗಿಲ್ಲ. 'ಒಂದು ಸ್ವಲ್ಪನಾದ್ರೂ ಮಾಡಿಸಿ' ಅಂತ ಸಂಕೋಚದಿಂದ ಹಲ್ಲುಗಿಂಜಿಕೊಂಡೇ ಕೇಳುತ್ತಿದ್ದರು. ಬಹಳ ಸಂಕೋಚದ ಸ್ವಭಾವ. ಕೊನೆಗೆ ಪೈಕಿಯವರೆ ಒಂದಿಷ್ಟು ಜನ ಸೇರಿಕೊಂಡು ಅವರಿಗಿಷ್ಟು ಪಾಲಿಸಿ ಕೊಡಿಸಿದರು. ಅಪ್ಪನಿಗೂ ಹಾಗಾಗಿಯೇ ಅವರಲ್ಲಿ ಹೆಚ್ಚು ಒಡನಾಟ. ಸಣ್ಣವನಿದ್ದಾಗ ಪಾಲಿಸಿಯ ಹಣ ಕೊಟ್ಟು ಬರಲು ಅಪ್ಪ ಖುದ್ದು ಅವರ ಅಂಗಡಿಗೆ ಹೋಗುತ್ತಿದ್ದಾಗ ನಾನೂ ಹೋಗುತ್ತಿದ್ದೆ. ಗಾಜಿನ ಬಾಟಲಿಯಲ್ಲಿ ಜೋಡಿಸಿಟ್ಟ ಬರ್ಫಿ-ಚಿಕ್ಕಿ-ಚಾಕಲೇಟು, ತೂಗುಬಿಟ್ಟಿದ್ದ ಪುಟ್ಟುಬಾಳೆ ಗೊನೆಯನ್ನು ನೋಡುತ್ತ ನಿಲ್ಲುತ್ತಿದ್ದೆ. 'ಅವರು ಒಂದೇ ಒಂದು ಚಾಕಲೇಟೂ ಕೊಡಲಿಲ್ಲ' ಅಂತ ಮನೆಗೆ ಬಂದು ಅಮ್ಮನಿಗೆ ದೂರು ಒಪ್ಪಿಸುತ್ತಿದ್ದೆ. ಅವರಿಗೇನೋ ಕೊಡಲು ಮನಸ್ಸಾಗುತ್ತಿತ್ತು ಆದರೆ ಒಂದು ಕೊಟ್ಟರೆ ಅದರ ನಷ್ಟ ತೂಗಿಸಲು ಹತ್ತು ಮಾರಾಟವಾಗಬೇಕು. ಇರುವ ಒಬ್ಬನೇ ಮಗನ ವಿದ್ಯಾಭ್ಯಾಸ ಕೂಡ ಅವರಿವರ ಸಹಾಯದಿಂದಲೇ ಮುಗಿಸಿದ್ದಾರೆ. ಮನೆಯಲ್ಲಿ ಮೊದಲಿನಿಂದಲೂ ಅವರ ಮೇಲೆ ಗೌರವ. ನನಗೂ ಇದ್ದೇ ಇದೆ. ನಾನೇನು ಬೆಳ್ಳಿಬಟ್ಟಲಿನಲ್ಲಿ ಉಂಡು ಬೆಳೆದವನೇ?' ಎಂಟು ಘಂಟೆಯ ಸಮಯಕ್ಕೇ ಗಿಜಿಗುಟ್ಟುವ ಟ್ರಾಫಿಕ್ಕಿನ ಸದ್ದಿನಲ್ಲೂ ಪ್ರಶಾಂತನ ಮನಸ್ಸು ಹಯವದನರಾಯರ ಕುರಿತೇ ಯೋಚಿಸುತ್ತಿತ್ತು. ಆಫೀಸಿನಲ್ಲಿ ಇಂದು ತುರ್ತಾಗಿ ಮಾಡಬೇಕಾಗಿದ್ದ ಕೆಲಸದ ಕಡೆ ಗಮನಹರಿಸಿದ. 'ಆ ಬಡ್ಡೀಮಗ ಸುರೇಶನಿಗೆ ಒಪ್ಪಿಸಿದ ಕೆಲ್ಸಾನ ಅವನು ಅರ್ಧಕ್ಕೆ ಹಾಳುಗೆಡವಿ ಅದೀಗ ಇಮ್ಮಡಿಯಾಗಿ ನನ್ನ ತಲೆಯ ಮೇಲೆ ಕೂತಿದೆ. ಇಂತವರಿಗೆಲ್ಲ ಹೇಗೆ ಕೆಲ್ಸ ಕೊಡ್ತಾರೋ?' ಎಂದುಕೊಂಡು ಒಳಗೇ ಉರಿದ. ಆಫೀಸಿನ ಅಂಗಲದೊಳಕ್ಕೆ ಬಸ್ಸು ನಿಲ್ಲುತ್ತಿದ್ದಂತೆ, ಇಳಿದು ಅಫೀಸಿನೊಳಕ್ಕೆ ನಡೆದ.

* * *

ಹಯವದನ ರಾಯರ ಮಗ resume ಕಳುಹಿಸಿದ್ದ- ನಿನ್ನೆ ಬೆಳಗ್ಗೆಯೇ. percent 60.8 ಅಂತ ಹಾಕಿತ್ತು. 'ಒಂದು ವೇಳೆ ನಾನು ಹೇಳಿ ಕೆಲಸ ಸಿಕ್ಕಿ ಇವನಿಗೆ ಕೆಲಸ ಮಾಡುವ ತಾಕತ್ತೇ ಇಲ್ಲದಿದ್ದರೆ? ಈಗಿರುವ ಎಷ್ಟೋ ಮಂದಿಯ ಹಾಗೆ' ಅಂದುಕೊಂಡ.

'Hey dude!, news ನೋಡಿದ್ಯಾ?. ಅದ್ಯಾರೋ ಇಂಡಿಯನ್, ಅಮೇರಿಕದಲ್ಲಿ fake petition ಕೊಟ್ಟು visa, green card processing ನಲ್ಲಿ fraud ಮಾಡಿ 50 million dollars ಹೊಡ್ದಿದ್ದಾನಂತೆ' ಹೆಗಲ ಮೇಲೆ ಕೈಯಿಟ್ಟು ಸುರೇಶ ಹೇಳಿದ.

'ಹೌದು ಮೊನ್ನೆ ತಾನೆ ನಾನು ಇನ್ನೊಂದು article ಓದಿದ್ದೆ. ಒಬ್ಬ ಅಮೇರಿಕನ್ ಬರೆದದ್ದು. 'telephonic interview ಮಾಡಿದಾಗ, ಯಾರದೋ ಹೆಸರಿನಲ್ಲಿ ಯಾರೋ ಮಾತಾಡುತ್ತಾರೆ. ಕರೆದು ಕೆಲ್ಸ ಕೊಟ್ರೆ ಅವನು ಬೇರೆ ಯಾರೋ ಆಗಿರ್ತಾನೆ. ನಯಾ ಪೈಸೆ ಕೆಲ್ಸ ಗೊತ್ತಿರೊಲ್ಲ' ಅಂತ ಭಾರತೀಯರಿಗೆ ಹೇಳೋ ಹಾಗೆ ಬಯ್ದಿದ್ದ. ಅಂತಃ fraud ಗಳನ್ನೆಲ್ಲ ನೇಣಿಗೆ ಹಾಕಬೇಕು. ಅವರು ಮಾಡೋ ಹಲ್ಕಾ ಕೆಲ್ಸಕ್ಕೆ ದೇಶದ ಮಾನನೂ ಹೋಗುತ್ತೆ. scoundrals' ಎಂದು ಸಿಟ್ಟು ತೋರಿದ. ಆ ಮಾತುಗಳಲ್ಲಿ ಸುರೇಶನನ್ನು ಚುಚ್ಚುವ ಉದ್ದೇಶವೂ ಇತ್ತು. ಸುರೇಶನ ಮುಖದಲ್ಲೂ ಸ್ವಲ್ಪ ಅಸಮಾಧಾನದ ಗೆರೆಗಳು ಮೂಡಿದವು. ಆ ವಿಷಯದ ಬಗ್ಗೆ ಇನ್ನು ಮಾತು ಮುಂದುವರಿಸಲಿಲ್ಲ. ಮಾತು ಬದಲಿಸುವ ಸಲುವಾಗಿ 'ಯಾರದ್ದು resume?' computer screen ನೋಡಿ ಕೇಳಿದ.

'ಒಬ್ಬ ಫ್ರೆಂಡ್ ನದ್ದು. ಯಾವಗ್ಲೋ ಕಳ್ಸಿದ್ದ. ಏನಪ್ಪ ಅಂತ ನೋಡ್ತಿದ್ದೆ' ಅಂತ ಹೇಳಿ resume ಕ್ಲೋಸ್ ಮಾಡಿದ.

ಸುರೇಶ ತನ್ನ ಜಾಗಕ್ಕೆ ಹೋಗಿ ಕೂತ ಮೇಲೆ 'ಗೊತ್ತಿರೋರು ಯಾರೂ ಇಲ್ಲ ಅಂತ ನಾನೇ ಈವತು ಫೋನ್ ಮಾಡಿ ಹೇಳಿದರಾಯ್ತು. ಯಾಕ್ ಬೇಕು ಇಲ್ಲದ ಉಸಾಬರಿ. ಇನ್ಮುಂದೆ ಯಾರಿಗೂ ಕೆಲಸ ಕೊಡಿಸೋಕೆ ಹೋಗದಿದ್ರೆ ಆಯ್ತು ಆಗ ಇಂತ ಮುಜುಗರದ ಪರಿಸ್ಥಿತಿಗಳು ತಪ್ಪುತ್ತೆ' ಎಂದುಕೊಂಡು ಕೆಲಸದಲ್ಲಿ ತೊಡಗಿದ.

* * *

ಮನೆಯಲ್ಲಿ ಸಂಜೆ ಕಾಫಿ ಹೀರುತ್ತಿರುವಾಗಲೇ ಗೊತ್ತಾದದ್ದು- ಲೇಖನ ಪೋಸ್ಟ್ ಮಾಡುವುದು ಮರೆತು ಹೋಗಿತ್ತು. ಕೂಡಲೇ ರೂಮಿಗೆ ಓಡಿ ಆಫೀಸಿನ ಬ್ಯಾಗಿನೊಳಗಿಂದ ಕವರ್ ತೆಗೆದ. ಹಾಳೆಗಳನ್ನು ಹೊರತೆಗೆದು, ತಾನು ಬರೆದ ಪದಗಳನ್ನು ಒಮ್ಮೆ ತಾನೇ ಓದಿಕೊಂಡ. ಮತ್ತೆ ಮತ್ತೆ ಹಯವದನ ರಾಯರೇ ಕಣ್ಮುಂದೆ ಬರುತ್ತಿದ್ದರು. 'ಆ ಹುಡುಗನಿಗೆ ಕೆಲಸ ಸಿಗದೇ ಇದ್ದರೆ?'.......ಸಿಗಲಿಲ್ಲ ಅಂದ್ರೆ ಅವನಿಗೆ ಯೋಗ್ಯತೆಯಿಲ್ಲ ಅಂತ ಅಷ್ಟೆ' ಎಂದು ಉತ್ತರಿಸಿಕೊಂಡ. 'ಎಷ್ಟು ಬುದ್ಧಿವಂತ ಹುಡುಗರಾದರೂ interview ನಲ್ಲಿ ಒತ್ತಡಕ್ಕೆ ಸಿಲುಕಿ ತಡವರಿಸುತ್ತಾರೆ; ಎಡವುತ್ತಾರೆ. ಹಾಗಾಗಿಹೋದರೆ?' ಹೀಗೊಂದು ಪ್ರಶ್ನೆ ಮೂಡಿತು. 'ಇದು ಕೇವಲ ನನ್ನ ಮನಸ್ಸಿಗೆ ನಾನೇ ಕೊಡುತ್ತಿರುವ ಸಮಜಾಯಿಷಿಯೇ?' ಎಂದುಕೊಳ್ಳುತ್ತ ಮತ್ತೆ ಬೇಂದ್ರೆಯ ಕಡೆ ನೋಡಿದ. 'ಬೇಂದ್ರೆಯನ್ನು ಇಷ್ಟಪಟ್ಟಷ್ಟು ಹಯವದನ ರಾಯರನ್ನು ಯಾಕೆ ಇಷ್ಟಪಡಲಾಗುತ್ತಿಲ್ಲ?' ಧುಗ್ಗೆಂದು ಪ್ರಶ್ನೆಯೆದ್ದಿತು. 'ಇವರು ಬುದ್ಧಿವಂತರಲ್ಲದ್ದಕ್ಕಾಗಿಯೇ? ನಿಜಕ್ಕೂ ಬೇಂದ್ರೆ ಏನೂ ಬರೆಯದೆ ಇರುತ್ತಿದ್ದರೆ ನಾನು ಅವರನ್ನು ಇಷ್ಟಪಡುತ್ತಿದ್ದೆನೆ?. ಒಂದು ಹಾಡಿನ ನಿರೀಕ್ಷೆಗೆ ಸ್ಪಂದಿಸುವ ಮನಸ್ಸು, ಒಬ್ಬರ ಬದುಕಿನ ನಿರೀಕ್ಷೆಗೆ ಏಕೆ ಸ್ಪಂದಿಸುತ್ತಿಲ್ಲ?. ಒಂದು ಸಾವಿಗೆ ಮರುಗಿದಷ್ಟು ಬದುಕಿಗೇಕೆ ಮರುಗುತ್ತಿಲ್ಲ?!..............ಗೂಡಂಗಡಿ, ಹೊಳಪಿಲ್ಲದ ಕನ್ನಡಕದ ಹಿಂದಿರುವ ಅಮಾಯಕ ಕಂಗಳು, ಬಾಳೆಗೊನೆ, ಮಿಠಾಯಿ ನೋಡಿ ಜೊಲ್ಲು ಸುರಿಸುವ ಹುಡುಗ, ಹಣತೆಯ ಕಂದು ಬೆಳಕಿನಲ್ಲಿ ತೊಯ್ದ ಕೋಣೆ, ಆ ತಾಯಿಯ ಶೂನ್ಯನೋಟ, ಬೇಂದ್ರೆ, ಹಯವದನರಾಯರು, ಹಾಡು, ಬದುಕು, ನಿರೀಕ್ಷೆ, ತಪಸ್ಸು, ಆಸೆ, ಹತಾಶೆ, ಸಾವು........ಒಂದರ ಮೇಲೊಂದು ಚಿತ್ರಗಳು ತೇಲಿಬರುತ್ತಿವೆ. ಹೋ!.........' ಕಣ್ಣೆದುರು ಎದ್ದುನಿಂತಿರುವ ಬದುಕಿನಂತಹ ಗೋಡೆ, ನೆತ್ತಿಯ ಮೇಲೆ ಗೋಡೆಯ ಎತ್ತರವನ್ನು ಮಟ್ಟ ಹಾಕಿರುವ ಸಾವಿನಂತಹ ಮಾಡು, ಅವೆರಡು ಸಂಧಿಸುವ-ಬೇರ್ಪಡುವ ಆಸೆ-ನಿರಾಸೆಗಳ ಅಡ್ಡಗೆರೆಯ ಮೇಲೆ ನೆಟ್ಟಿದ್ದ ದೃಷ್ಠಿ ಕೆಳೆಗಿಳಿಯಿತು. ಕೈಲಿದ್ದ ಹಾಳೆಗಳನ್ನು ಮೇಜಿನ ಮೇಲೆಸೆದು ಎರಡೂ ಅಂಗೈಗಳು ಕಿವಿ ಉಜ್ಜಿಕೊಳ್ಳುತ್ತ ಗಲ್ಲದ ತುದಿಯಲ್ಲಿ ಸೇರಿದವು. ' ಬೇಂದ್ರೆ ಏನೂ ಬರೆಯದೆ ಇರುತ್ತಿದ್ದರೆ ಅವರನ್ನು ನಾವು ಗುರುತಿಸುತ್ತಿದ್ದೆವಾ? ಹೀಗೆ ಅವರ ಬಗ್ಗೆ ಮೆಚ್ಚಿ ಬರೆಯುತ್ತಿದ್ದೆನಾ? ಹಾಗಾದರೆ ಕೇವಲ ಬರೆದದ್ದಕ್ಕಾಗಿಯೇ ಅವರನ್ನು ಮೆಚ್ಚಬೇಕಾ? ಹಯವದನ ರಾಯರ ಬದುಕಿನಲ್ಲಿ ಯಾವ ದೋಷವಿದೆ?' ಚದುರಿದ್ದ ಹಾಳೆಗಳನ್ನು ಕೈಗೆತ್ತಿಕೊಂಡು, ಕವಿತೆಗಳ ವ್ಯಾಖ್ಯಾನದ ಭಾಗಗಳನ್ನು ಬದಿಗಿರಿಸಿದ. ಬೇಂದ್ರೆಯ ಬಗ್ಗೆ ಬರೆದ ಭಾಗದಲ್ಲಿ, ಕೊನೆಯಲ್ಲಿ ಒಂದು ಸಾಲು ಸೇರಿಸಿದ: ನಾನು ಬೇಂದ್ರೆಯವರ ಯಾವ ಕವಿತೆಗಳನ್ನೂ ಅಧ್ಯಯನ ಮಾಡಿಲ್ಲ.

'ನಾಳೆ ಹಯವದನ ರಾಯರ ಮಗನ ವಿಚಾರ ಮಾತಾಡಬೇಕು' ಎಂದು ನಿರ್ಧಾರ ಮಾಡಿ ರೂಮಿನಿಂದ ಹೊರಬಂದ. 'ನಿನಗಾಗಿ ಓಡೋಡಿ ಬಂದೆ ನಾನು, ಕಾಣದೆ ಹೀಗೇಕೆ ಮರೆಯಾಗಿ ಹೋದೆ, ಮರೆಯಾಗಿ ಹೋದೆ ನೀನು.....' ಟಿ.ವಿ ಹಾಡುತ್ತಿತ್ತು. ಆ ಹಾಡು ಹೊಸ ಅರ್ಥಗಳನ್ನು ಹುಟ್ಟಿಹಾಕುತ್ತಿದ್ದವು.

************************

ಬದುಕಿನ ದ್ವಂದ್ವ

ವಿಚಾರಗಳ ದ್ವಂದ್ವವನ್ನೂ, ಅವುಗಳು ಹುಟ್ಟುಹಾಕುವ ಗೊಂದಲಗಳು ಮತ್ತು ಆ ಗೊಂದಲಗಳಲ್ಲಿ ಮುಳುಗಿ ತಮ್ಮನ್ನೆ ಕಳೆದುಕೊಳ್ಳುವ ಮತ್ತೆ ಹುಡುಕುವ ಬದುಕಿನ ಕರಾಳ ವಾಸ್ತವತೆಯನ್ನ ತುಂಬಾ ಮಾರ್ಮಿಕವಾಗಿ ರೂಪಿಸಿದ್ದೀರ. ನಿಮ್ಮ ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ.

'ನೀ ಹಿಂಗ ನೊಡಬ್ಯಾಡ ನನ್ನ' ಕವನದ ಹಿನ್ನೆಲೆ ಈ ಮೊದಲು ತಿಳಿದಿರಲಿಲ್ಲ. ಮತ್ತೊಮ್ಮೆ ಆ ಕವನ ಕೇಳಿದೆ. ಪ್ರತಿಯೊಂದು ಪದಕ್ಕೂ ಹೊಸ ಅರ್ಥ ಸಿಕ್ಕಿತು.

ಹೀಗೆ ಬರೀತಾ ಇರಿ...ಒಂದಿಷ್ಟು ಕಥೆ ಮತ್ತಿಷ್ಟು ಕವನ...

a story or poem gains

a story or poem gains importance in the mind of a reader more because of the way he relates to the "bhAvAbhivyakti" of the writer.
There is no second thought about the superior literary value of Vikram's writings, which can be savoured in "adyaaru kavigaLu" paragraph.

I feel varakavi bEMdre here just stands as a symbolic representation of all we Idolize

konegoMdu ravi beLagere ukti:
beMdavarella bEMdre Agalla
geechidavarella beechi Agalla

kathege dhanyavAdagaLu Vikram!

ಬೆಂದ್ರೆ ಬೇಂದ್ರೆ

ವಿಕ್ರಮ್, ನಿಮ್ಮ ಕತೆ "ಬೇಂದ್ರೆ ಗುಂಗಿನಲ್ಲಿ" ತುಂಬಾ ಹಿಡಿಸಿತು. ಬೇಂದ್ರೆಯವರ ನೋವಿಗೆ ಮರುಗುವ ಹೃದಯ ಹಯವದನರಾಯರ ಕಷ್ಟಕ್ಕೆ ಕಲ್ಲಾಗುವುದು ವಿಸ್ಮಯವಾದರೂ ಬದುಕಿನ ಕಟುಸತ್ಯ. ಹಯವದನರಾಯರು ಬರೀ ಪಾಡು ಪಟ್ಟರೆ ಬೇಂದ್ರೆಯವರು ಪಟ್ಟ ಪಾಡನ್ನು ಹುಟ್ಟುಹಾಡಾಗಿಸಿದರು. ಹಾಗಾಗಿ ಹಯವದನರಾಯರಂತವರು ಮರೆತು ಹೋಗುತ್ತಾರೆ, ಬೇಂದ್ರೆಯವರು ಮುಂದೆಯೂ ನೆನಪಿರುತ್ತಾರೆ. ಬದುಕಿನಲ್ಲಿ ಬಿದ್ದ ಏಟುಗಳು ಕವಿ ಬೇಂದ್ರೆಯವರನ್ನು ಮಾಗಿಸಿದವು. "ಬೆಂದ್ರೆ ಬೇಂದ್ರೆ ಆಗ್ತಾರ, ಉಳಿದವರು ಬೂದಿ ಆಗ್ತಾರ" ಎಂದು ಬೇಂದ್ರೆಯವರ ಕುರಿತು ಅವರ ಗೆಳೆಯರೊಬ್ಬರು ಬರೆದ ನೆನಪು.

ಉತ್ತಮ ಕಥೆಗೆ ಅಭಿನಂದನೆಗಳು,

ತ್ರಿವೇಣಿ

ಅನುಮಾನ

ಕತೆ ಹೆಣೆದ ರೀತಿ ಚೆನ್ನಾಗಿದ್ದು, ಎಲ್ಲೋ ಯಾರೋ ಬರೆದ ಹಾಡಿಗೆ ಸ್ಪಂದಿಸಿದ ಭಾವುಕ ಮನಸ್ಸು, ಪರಿಚಯದ ವ್ಯಕ್ತಿಗೆ ಸಹಾಯ ಮಾಡುವ ಬಗೆಗಿನ ವಾಸ್ತವಿಕ ನಿರ್ಧಾರವನ್ನು ಕೈಗೊಳ್ಲುವಲ್ಲಿ ಅನುಭವಿಸಿದ ತುಮುಲ ಚೆನ್ನಾಗಿ ಮೂಡಿ ಬಂದಿದೆ. ಬೇಂದ್ರೆಯವರನ್ನು ಹಯವದನರಾಯರಿಗೆ ಹೋಲಿಸಿ ಕತೆಯನ್ನು ನಿರೂಪಿಸಿದ ತಂತ್ರ ಸಫಲವಾಗಿದ್ದರೂ,ಆ ಹೋಲಿಕೆಯೇ ಕತೆಯನ್ನು ಸ್ವಲ್ಪ ಮಟ್ಟಿಗೆ ನೈಜತೆಯಿಂದ ದೂರವಿರಿಸುತ್ತಿದೆಯೇನೋ ಎಂಬ ಅನುಮಾನ ಕಾಡುತ್ತದೆ.

'ಬೇಂದ್ರೆಯವರೂ ಏನೂ ಬರೆಯದಿರತಿದ್ದರೂ ಇಷ್ಟವಾಗುತ್ತಿದ್ದರೇನೋ' ಎಂಬ ಸಾಲಿನ ಬಗ್ಗೆ ನನಗೆ ಸ್ವಲ್ಪ ಗೊಂದಲವಿದೆ -ಅವರು ಬರೆಯದಿರದಿದ್ದಲ್ಲಿ ಕಥಾ ನಾಯಕನಿಗೆ ಅವರ ಬಗ್ಗೆ ಹೇಗೆ ತಿಳಿದಿರುತ್ತಿತ್ತು? ತಿಳಿಯದ ವ್ಯಕ್ತಿಯನ್ನು ಇಷ್ಟಪಡುವ ಸಂದರ್ಭವೇ ಇರುತ್ತಿರಲಿಲ್ಲವಲ್ಲ?

ಬೇಂದ್ರೆ ಗುಂಗಿನಲ್ಲಿ ಕಥೆ ಕುರಿತು

ಕಥೆ ಬಹಳ ಸ್ವಾರಸ್ಯವಾಗಿದೆ. ಮೊದಲಿಗೆ ನಾನು ಎದುರಿಸಿದ ಒಂದೆರಡು ಸಮಸ್ಯೆಗಳು. ಅವು ನನ್ನೊಬ್ಬನದೇ ಸಮಸ್ಯೆಯಾಗಿರಲೂಬಹುದು: ೧) ಕಥೆಯಲ್ಲಿ ರಂಗರಾಯರು ಕವಿತೆಗೆ ತಕ್ಕ ಸಂಗೀತ ಒದಗಿಸಿದ್ದರೆಂದು ಹೇಳಲಾಗಿದೆ. ಇದು ಯಾವ ರಂಗರಾಯರು? ಅವರ ವಿಚಾರ ಮತ್ತೆ ಕಥೆಯಲ್ಲಿ ಪ್ರಸ್ತಾಪವಿಲ್ಲ. ೨.) 'ಏನೂ ಬರೆಯದಿದ್ದರೂ ಬೇಂದ್ರೆ ನನಗೆ ಇಷ್ಟವಾಗುತ್ತಿದ್ದರು' ಎಂಬಲ್ಲಿಯ ವರೆಗೆ "ನಾನು" ಎಂದಿದ್ದು, ಇದ್ದಕ್ಕಿದ್ದಂತೆ ಪ್ರಶಾಂತ ಕಥೆಯನ್ನು ಪ್ರವೇಶಿಸುತ್ತಾನೆ ಎಂದೆನಿಸಿತು. ಇದು ನನ್ನನ್ನು ಸ್ವಲ್ಪ ಗೊಂದಲಕ್ಕೆ ಸಿಲುಕಿಸಿತು. ಅಲ್ಲದೆ 'ಬೇಂದ್ರೆಯವರ ಬಗ್ಗೆ ಬರೆಯುತ್ತಿರುವಾಗಲೆ ಫೋನ್ ರಿಂಗಾಗಿದ್ದು....' ಇನ್ನೂ ಸ್ವಲ್ಪ ಗೊಂದಲಕ್ಕೆ ಎಡೆಮಾಡಿಕೊಟ್ಟಿತು. ಪ್ರಶಾಂತ್ ಮತ್ತು "ನಾನು" ಗಳ ಸಂಘರ್ಷವಾಗಿದೆ ಇಲ್ಲಿ ಅಂದೆನಿಸಿತು ನನಗೆ. ಪ್ರಶಾಂತ್ ಬೆಂದ್ರೆಯವರ ಬಗ್ಗೆ ಬರೆಯುತ್ತಿದ್ದನೆ? (ಕಥೆಯ ನಿರೂಫಣೆಯಂತೆ, ಹೌದು) "ನಾನು" ಬೇಂದ್ರೆಯವರ ಬಗ್ಗೆ ಬರೆದಿದ್ದಂತೂ ನಿಜ! ಈ ಬಗ್ಗೆ ಸ್ವಲ್ಪ ವಿವರಣೆ ಕೊಟ್ಟರೆ ನನಗಂತೂ ಅನುಕೂಲವಾದೀತು. ಇವೆರಡನ್ನೂ ******* ಗಳಿಂದ ಬೇರ್ಪಡಿಸಿದ್ದರೆ ಚೆನ್ನಾಗಿರುತ್ತಿತ್ತೋ ಏನೊ!

ಇನ್ನು ಈ ಕಥೆ ಸಾರುವ ಸಂದೇಶ: ಯಾವುದಾದರೂ ಒಂದು ಕಥೆಯನ್ನೋ, ಕವನವನ್ನೋ ಓದಿದಾಗ ಭಾವಪರವಶರಾಗುವುದು ಸುಲಭ. ಆದರೆ ನಿಜ ಜೀವನದಲ್ಲಿ ಅಂಥದೇ ಸನ್ನಿವೇಶಗಳು ಬೇಕಾದಷ್ಟಿದ್ದರೂ, ಅವುಗಳ ಬಗ್ಗೆ ನಾವು ಉದಾಸೀನರಾಗುತ್ತೇವೆ. ಈ ಕಥೆಯಲ್ಲೂ ಕೂಡ ಅಂಥದೇ ಸಂದರ್ಭವನ್ನು ಕಾಣಬಹುದು. ಬೇಂದ್ರೆಯವ ಹಾಡಿನ ಮೇಲೆ ವ್ಯಾಖ್ಯಾನ ಮಾಡುವ ಲೇಖನ, ಅಲ್ಲಿನ ಸನ್ನಿವೇಶ, ಕಥಾನಾಯಕನನ್ನು ಹಯವದನ ರಾಯರ ಬದುಕಿಗೆ ಸ್ಪಂದಿಸಲು ಎಡೆಮಾಡಿ ಕೊಡುತ್ತದೆ,ಅವರ ಮೇಲೆ ಅನುಕಂಪ ಹುಟ್ಟಿಸುತ್ತದೆ. ಅವರ ಮಗನಿಗೆ ಕೆಲಸಕೊಡಲು ಸಹಾಯ ಮಾಡಿದನೋ ಇಲ್ಲವೋ, ಹಯವದನ ರಾಯರ ಕಷ್ಟ ಜೀವನವನ್ನು ಅರ್ಥ ಮಾಡಿಕೊಡುವಷ್ಟು ಕಥೆ ಫಲದಾಯಕವಾಗಿದೆ. ಓಟ್ಟಿನಲ್ಲಿ ಕಥೆ ಮನಮುಟ್ಟುವಂತಿದೆ.

ಇನ್ನು ಬೇಂದ್ರೆಯವರು ಈ ಕವನ, ಹಾಗೂ ಇತರ ಕವನಗಳನ್ನು ಬರೆಯುವ ಸನ್ನಿವೇಶದ ಬಗ್ಗೆ ನನಗೆ ದೊರೆತ ಕೆಲವು ಮಾಹಿತಿಗಳು: ವಾಮನ ಬೇಂದ್ರೆಯವರ ಪ್ರಕಾರ, ಈ ಕವನ ತಮ್ಮ ಮಗಳು ಲಲಿತಾ ಬಾಲ್ಯದಲ್ಲೇ ಸಾವನ್ನಪ್ಪಿದಾಗ ಬರೆದ ಶೋಕಗೀತ. ಮಗಳನ್ನು ನೋಡಲು ಧಾವಿಸುತ್ತಿದ್ದ ಬೇಂದ್ರೆಯವರ ಆಗಮನಕ್ಕೆ ಮೊದಲೇ ಮಗು ತೀರಿಕೊಂಡಳಂತೆ. ಆ ಅಳಲನ್ನು ಕವನವೇ ಹೃದಯದ್ರಾವಕವಾಗಿ ಸಾರುತ್ತದೆ. ಲಲಿತಾಳ ಬಗ್ಗೆ ಬರೆದ ಇನ್ನೊಂದು ಕವನದಲ್ಲಿ ಈ ಕೆಳಗಿನ ಸಾಲು ಇವೆ:
ಕವಿಲೀಲೆಯಂತೆ ಎಲೆ ಕೂಸೆ, ಲಲಿತಾ! ನಿನ್ನ
ಒಂದುವರೆ ತಿಂಗಳಿನ ಕುನ್ನಿ ಬಾಳು;
ತಲೆದೋರಿ ಮೈಮೆತ್ತು ಕಣ್ಣತೆರೆಯದ ಕಾಣ-
ದೊಂದಕ್ಕೆ ಹೆಸರಿಟ್ಟು ಬರೆದ ಹಾಡು.
ಬೇಂದ್ರೆಯವರಿಗೆ ಒಟ್ಟು ಒಂಭತ್ತು ಮಕ್ಕಳು. ಆದರೆ ಕೊನೆಯಲ್ಲಿ ಉಳಿದವರು ಮೂರು ಮಂದಿ ಮಾತ್ರ. ಹಿರಿಯ ಮಗ ರಾಮ ಮತ್ತು ಕಿರಿಯ ಮಗ ಆನಂದ ಇವರಿಬ್ಬರೂ ಎಂಟು ದಿನಗಳ ಅಂತರದಲ್ಲಿ ತೀರಿದರಂತೆ. ಮಕ್ಕಳನ್ನು ಕಳೆದುಕೊಂಡ ಶೋಕ, ಸಂಸಾರದಲ್ಲಿ ಎದುರಿಸಬೇಕಾದ ಲೆಕ್ಕವಿಲ್ಲದ ಕಷ್ಟ-ಕಾರ್ಪಣ್ಯಗಳು ಬೇಂದ್ರೆಯವ ಬದುಕಿಗೆ ಅಂಟಿಕೊಂಡು ಬಂದ 'ವರ'ಗಳು! ಅವೆಲ್ಲವನ್ನೂ ಎದುರಿಸಿ, ಸಾರಸ್ವತಲೋಕಕ್ಕೆ ಅವರು ನೀಡಿದ ಕವನ ಸಂಪತ್ತಿಗಾಗಿ ನಾವೆಲ್ಲರೂ ಅವರಿಗೆ ಕೃತಜ್ಞರಾಗಿರುತ್ತೇವೆ.
ಅವರ ಮೂರನೆಯ ಮಗ ಭಾಸ್ಕರ ಬಾಲ್ಯದಲ್ಲೇ ತೀರಿಕೊಂಡಾಗ ಅವರೊಂದು ಕವನ ಬರೆದಿದ್ದರು. ಅದರ ಶೀರ್ಷಿಕೆ "ಗಿಳಿಯು ಪಂಜರದೊಳಗಿಲ್ಲಾ" ಎಂದು. ಪುರಂದರ ದಾಸರು ತಮ್ಮ ಮಗ ತೀರಿಕೊಂಡಾಗ ಹಾಡಿದರೆಂಬ ಕವನದ ಸೊಲ್ಲನೇ ಇಲ್ಲಿ ನಾವು ಗಮನಿಸಬಹುದು. 'ಏನೆಂದು ಕೂಗಲಿ ನಿನ್ನ ಎನ್ನಾ ಚೆನ್ನಾ' ಎಂಬ ಸಾಲಿನಿಂದ ಪ್ರಾರಂಭವಾಗುತ್ತದೆ ಈ ಕವನ. ಅದರಲ್ಲಿ ಬರುವ ಈ ಕೆಳಗಿನ
ಬರಿದು ನಿನ್ನೀ ಉಡುಪೂ, ತೊಡುಪೂ
ಬರಿಯ ತೊಟ್ಟಿಲು, ಬರಿಯ ಹಾಸಿಗೆ,
ಬರಿಯ ಅಂಗಳ, ಬರಿಯ ಹಿತ್ತಲು,
ಬರಿಯ ಮನೆ, ತಡೆಯುವೆನೆ ರಣರಣವನ್ನಾ
ಸಾಲುಗಳು ನಮ್ಮ ಹೃದಯದ್ರವಿಸುವುದಂತೂ ನಿಜ. ಕೊನೆಯಲ್ಲಿ
ಕರುಳು ಕಳವಿದು ಸರಿಯೇ, ಹರಿಯೇ,
ದಾನ ದೊರೆಯದು ಎಂದು ವಂಚಿಸಿ
ದೀನ ಮಾತೆಯ - ನಿನ್ನ ನಾಟಕ
ನೀನೆ ಬಲ್ಲೆಯೊ ಘನಕರುಣಸಂಪನ್ನಾ
ಎಂದು ಕವನ ಮುಗಿಸುತ್ತಾರೆ. ಇಲ್ಲಿ ಸಾವೆಂಬ ಸಿದ್ಧಾಂತವನ್ನು ಒಪ್ಪಿಕೊಂಡು, ಅದರಲ್ಲೆ ಸಾಂತ್ವನ ಪಡೆಯುವ ಚಿಹ್ನೆ ಕಾಣಿಸುತ್ತದೆ.
ತಮ್ಮ ಸಂಸಾರ ದುರ್ದೈವವವಲ್ಲದೆ, ಬೇರೆಯವರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಕವನಗಳೂ ಸಾಕಷ್ಟಿವೆ. ಇದೇ ಕಾಲಂ ನಲ್ಲಿ ಪ್ರವೀಣ್ ಬರೆದ ಕೆಲವು ವಿಷಯಗಳಿಗೆ ಇದು ಪೂರಕವಾಗಬಹುದೆಂಬ ನಂಬಿಕೆ ನನ್ನದು.

ರಂಗರಾವ್ ಕುರಿತು

ರಂಗರಾವ್, ಇವರು ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರು. 'ಸಾಕ್ಷಾತ್ಕಾರ', 'ರಂಗನಾಯಕಿ' ಮುಂತಾದ ಚಿತ್ರಗಳ ಹಾಡುಗಳಿಗೆ ರಾಗಸಂಯೋಜನೆ ಮಾಡಿರುತ್ತಾರೆ.

ಪ್ರಶಾಂತನ ಮನಸ್ಸಿನ ಅವಲೋಕನವನ್ನು ಅವನ ಮಾತಿನ ಮೂಲಕವೇ ನಿರೂಪಿಸಿದ್ದೇನೆ. ಹಾಗೆಯೇ 'ಏನೂ ಬರೆಯದೆ ಇರುತ್ತಿದ್ದರೂ ಬೇಂದ್ರೆ ನನಗೆ ಇಷ್ಟವಾಗುತ್ತಿದ್ದರು' ಎನ್ನುವಲ್ಲಿಯ ತನಕ ಅದು ಪ್ರಶಾಂತ ಲೇಖನ ಬರೆಯುತ್ತಿರುವ ಸಂದರ್ಭ. ಲೇಖನದ ಭಾಗವನ್ನು ಕೋಟ್ (' ') ಮಾಡಿದ್ದರೆ ಗೊಂದಲಕ್ಕೆ ಅವಕಾಶವಿರುತ್ತಿರಲಿಲ್ಲ.

ಕನ್ನಡಿಯಾಗುವ ಕಥೆ!

ವಿಕ್ರಂ ಅವರ ಕಥಾ ನೈಪುಣ್ಯದ ಬಗ್ಗೆ ನಾನು ವಿಶೇಷವಾಗಿ ಇಲ್ಲಿ ಬರೆಯುವುದು ಆವಶ್ಯವಲ್ಲ. ಅವರ ಕಥೆಯೇ ಈ ಕೆಲಸವನ್ನು ಅಪೂರ್ವವಾಗಿ ಮಾಡಿದೆ. ಕಥೆಯ ಅಭಿವ್ಯಕ್ತಿಯ ಶೈಲಿ ವಿಭಿನ್ನವಾಗಿದ್ದು, ಗಮನಾರ್ಹವಾಗಿದೆ. ಎಂದರೆ, ಕಥೆಯ ಪ್ರಾರಂಭಿಕ ಲಕ್ಷಣಗಳು ಪಾತ್ರವೇ ಹೇಳುವಂತಿದ್ದು, ನಂತರದಲ್ಲಿ ಅದು ಬದಲಾಗಿ ಮೂರನೆಯ ವ್ಯಕ್ತಿಯೊಬ್ಬ ಕಥೆಯನ್ನು ಹೇಳುವ ರೂಪವನ್ನು ಪಡೆಯುತ್ತದೆ.
ಇನ್ನು ಕಥೆಯ ವಸ್ತುವಿನ ಬಗ್ಗೆ ನನ್ನ ಅನಿಸಿಕೆಗಳು - ಮನುಷ್ಯನಲ್ಲಿ ಸಹಜವಾಗಿರುವ ಗೊಂದಲಗಳು, ತಿಣುಕಾಟಗಳು, ಅವನಲ್ಲಿ ತಲೆದೋರುವ ಆಷಢಭೂತಿಯನ್ನು ಎತ್ತಿ ತೋರುತ್ತದೆ. ಬೇಂದ್ರೆಯವರ ಕವನದ ವಿಶ್ಲೇಷಣೆಯನ್ನು ಬರೆಯುವಾಗಿನ ಆತನ ಯೋಚನೆ, ಲೌಕಿಕ ವ್ಯವಹಾರದಲ್ಲಿ ಹೊಂದುವುದಿಲ್ಲವೆಂಬುದು ಅವನ ಯೋಚನಾ ಲಹರಿಗಳು ಸೂಚಿಸುತ್ತವೆ. ಬೇಂದ್ರೆಯವರ ಕುರಿತು ಬರೆಯುವಾಗಿನ ಆತನ ಮಾತುಗಳು ನೈಜವಾದವೇ ಇಲ್ಲವೇ ಎಂಬುವ ಸಂದೇಹಗಳು ಕೇವಲ ಓದುಗನಲ್ಲಷ್ಟೇ ಅಲ್ಲ, ಪಾತ್ರಕ್ಕೂ ಬರುವುದು ಉಲ್ಲೇಖಾರ್ಹ. ಬೇಂದ್ರೆಯವರು ಒಬ್ಬ ಪ್ರಖ್ಯಾತ ಕವಿಯಾಗಿರದಿದ್ದರೆ, ಅವನು ಅವರನ್ನು ನಿಜವಾಗಿಯೂ ಆರಾಧಿಸುತ್ತಿದ್ದನೆ? ನಮ್ಮ ಯೋಚನೆಗಳ ಮೇಲೆ ಒಬ್ಬರ ವ್ಯಕ್ತಿತ್ವ ಅದೆಷ್ಟು ಪ್ರಭಾವವನ್ನು ಬೀರಬಲ್ಲದು ಎಂಬುದು ಇಲ್ಲಿ ಕಾಣ ಸಿಗುತ್ತದೆ. ಬೇಂದ್ರೆಯವರ ದುಃಖಕ್ಕೆ ಸ್ಪಂದಿಸಿದ ಇವನ ಮನಸ್ಸು ಹಯವದನ ರಾಯರ ಸ್ಥಿತಿಗೆ ಮರುಗಲು ಏಕೋ ಹಿಂಜರಿಯಿತು. ಈ ಹಿಂಜರಿಕೆಗೆ ಅವನೇ ಕಾರಣಗಳನ್ನೂ ಹೇಳಿಕೊಳ್ಳುತ್ತಾನೆ. ಪಾತ್ರ ಈ ಮೂಲಕ ತನ್ನ ಕೃತ್ಯಗಳಿಗೆ ಸಮಾಧಾನವನ್ನೂ ಕಂಡುಕೊಳ್ಳಲು ಪ್ರಯತ್ನಿಸುತ್ತದೆ, Rationalize ಮಾಡಲು ಪ್ರಯತ್ನಿಸುತ್ತದೆ. ಪಾತ್ರದಲ್ಲಿ ತನ್ನ ನಿರ್ಲಕ್ಷ್ಯದ ಬಗ್ಗೆ ಪಾಪ ಪ್ರಜ್ಞೆ ಇದೆಯೆಂಬುದು ಇದರಿಂದ ಗೋಚರವಾಗುತ್ತದೆ.
ಒಟ್ಟಿನಲ್ಲಿ ದಿನನಿತ್ಯದ ವಾಸ್ತವಕ್ಕೆ ಹಿಡಿದ ಕನ್ನಡಿ ಈ ಕಥೆ. ಪ್ರಖ್ಯಾತ ಕವಿಗಳ, ಕಲಾವಿದರ ಕಷ್ಟಗಳಿಗೆ ಮರುಗುವ ಮನ, ನಮ್ಮವರಲ್ಲೇ ಇರುವವರ ದುಃಖಕ್ಕೆ ಮರುಗಲು ಸಿದ್ಧವಿರುವುದಿಲ್ಲ. ವೇದಾಂತಗಳನ್ನು ಅರಿತರೂ, ಮಾನವತೆಯನ್ನು ಅರಿಯದ ಟೊಳ್ಳುತನವನ್ನು ತೋರಿಸುವ ಈ ಕಥೆ, ಆ ವಿಷಯವಾಗಿಯೇ ನನ್ನ ಮನಸ್ಸನ್ನು ತಟ್ಟಿತು. ಈ ಕಥೆಯನ್ನು ಬರೆದ ವಿಕಂ ಅವರಿಗೆ ಅಭಿನಂದನೆಗಳು. :)