ಕವನ: ತೆರೆ - ಸುಪ್ತದೀಪ್ತಿ

ಕಣ್ಣು ಕಲಕಿದೆ, ಹೃದಯ ನರಳಿದೆ,
ಮನಸು ಗೊಂದಲ, ಗೋಜಲು;

ಬಣ್ಣ ಕರಗಿದೆ, ಚಿತ್ರ ಕಲಸಿದೆ,
ಕನಸು ಹಳಸಲು, ಮಾಸಲು.

ವಾಹಿ ಕಣದೊಳು, ಅಣುವ ತುಣುಕೊಳು,
ಅಡಗಿ ತಾಮಸ ದಾನವ;
ಗೇಹ ಗೆಲ್ಲುತ, ಮೋಹ ಮೆಲ್ಲುತ,
ನಡೆಯ ಸಾಧಿಸಿ ನಿಲ್ಲುವ.

ಬಯಸಿ ಪಡೆದಿಹ ಪುಟ್ಟ ಕುಡಿಯದು,
ನೆಟ್ಟ ನಡೆಯದೆ ಬಾಗಿದೆ;
ಪಯಣ ಎಲ್ಲಿಗೊ, ಗುರಿಯು ಎತ್ತಲೊ,
ಕಟ್ಟಿ ಬುತ್ತಿಯ ಹೊರಟಿದೆ.

ಕುರುಡು ಮೋಹಕೆ, ಸೆಳೆವ ಪಾಶಕೆ,
ಯಾವ ಬಂಧನ ನಿಲ್ಲದು;
ಕರಡು ಪ್ರತಿಯಲಿ ಸಂದ ಜೀವವು-
ದೇವ ಬಂಧವ ಬಲ್ಲುದು.

ಮರಳಿ ಅರಳುವ, ಹೊರಳಿ ಮರಳುವ,
ನಿತ್ಯ ನೂತನ ಚೇತನ;
ಕರುಳಿಗಿಲ್ಲದ ಕಣ್ಣ ಮಬ್ಬಿಗೆ-
ಮರ್ತ್ಯದರಿವಿನ ಸಾಂತ್ವನ

- ಸುಪ್ತದೀಪ್ತಿ.

ತೆರೆ - ತಿದ್ದುಪಡಿ

ಕವನದ ಕೊನೆಯ ಸಾಲಿನಲ್ಲಿ "ಮರ್ತ್ಯುದರಿವಿನ" ಪದವನ್ನು "ಮರ್ತ್ಯದರಿವಿನ" ಎಂದು ತಿದ್ದಲಾಗಿದೆ. ತಪ್ಪಿಗೆ ವಿಷಾದವಿಸುತ್ತೇವೆ - ಸಂ

Tere

ಸುಪ್ತದೀಪ್ತಿಯವರ 'ತೆರೆ' ಹೆತ್ತಮ್ಮನ
ಒಂದು ಧಾರುಣ ಮತ್ತು ಅಸಹಾಯಕ ಪರಿಸ್ಥಿತಿಯನ್ನು
ಕವನ ರೂಪದಲ್ಲಿ ಹಂಚಿಕೊಂಡು ಓದುಗರ ಸಂವೇದನೆಯಲ್ಲಿ
ಬೆರೆತ ಕವನ. ಬೇಂದ್ರೆಯವರು ತಮ್ಮ ಸ್ವಂತ
ಅನುಭವದಿಂದ ಬರೆದ 'ನೀ ಹಿಂಗ ನೋಡ ಬ್ಯಾಡ
ನನ್ನ..' ಕವಿತೆಯನ್ನು ಓದಿದಾಗ ಆದಷ್ಟೇ
ದುಃಖ ಉಮ್ಮಳಿಸಿ ಬರುವ ಸನ್ನಿವೇಷ ಸುಪ್ತದೀಪ್ತಿಯವರ
ಈ ಕವಿತೆಯಲ್ಲೂ ನಾವು ಕಾಣಬಹುದು. ಮುಂದುವರೆಸಿ
ಬೇಂದ್ರೆಯವರು '..ಅತ್ತಾರೆ ಅತ್ತು ಬಿಡು'
ಎಂದು ಹೆತ್ತಮ್ಮನ್ನಿಗೆ ಹೇಳುವ ಸಮಾಧಾನದ
ನುಡಿಗಳಲ್ಲಿ ನಾವು ತಂದೆಯ ರೋಧನ, ಅಸಹಾಯಕತೆಯನ್ನು
ಗುರಿತಿಸಿ ಅವರ ದುಃಖದಲ್ಲಿ ಪಾಲ್ಗೊಂಡಿದ್ದು
ಇಲ್ಲಿ ನನಗೆ ನೆನಪು ಬಂತು. ಬರಲಿರುವ
ಸಾವಿನ ನಿಶ್ಚಿತೆಯಲ್ಲೂ ಅನಿಶ್ಚಿತ
ಆಶಾಕಿರಣಗಳು ಹುಟ್ಟಿ ಶಮನವಾಗುವ ಸಂದಿಗ್ಧ
ಪರಿಸ್ಥಿತಿಯನ್ನು ಈ ಎರಡೂ ಕವನಗಳು ಮನ
ಬಿರಿಯುವಂತೆ ವರ್ಣಿಸುತ್ತವೆ.

ಮಾಸದ ನೋವು

ಕಣ್ಣು ಕಲಕಿದೆ, ಹೃದಯ ನರಳಿದೆ, ಬಣ್ಣ ಕರಗಿದೆ, ಚಿತ್ರ ಕಲಸಿದೆ......

ಬರೆಯಬೇಕೋ ಬೇಡವೋ ಎನ್ನುವ ಗೊಂದಲದಲ್ಲೇ ಬರೆಯುತ್ತಿದ್ದೇನೆ.

ಬಯಸಿ ಪಡೆದಿಹ ಪುಟ್ಟ ಕುಡಿಯದು
ನೆಟ್ಟ ನಡೆಯದೆ ಬಾಗಿದೆ

ಈ ಸಾಲುಗಳು ಕವಿತೆಯ ಹಿನ್ನಲೆ ಒದಗಿಸುತ್ತದೆ.

ಕರುಳಿಗಿಲ್ಲದ ಕಣ್ಣ ಮಬ್ಬಿಗೆ-
ಮೃತ್ಯುದರಿವಿನ ಸಾಂತ್ವನ

ಅಮ್ಮನಿಗಲ್ಲದೆ ಮತ್ಯಾರಿಗೂ ಬರೆಯಲು ಸಾಧ್ಯವೇ ಇಲ್ಲದಂತಹ ಸಾಲಿದು. ಉಕ್ಕುಕ್ಕಿ ಬರುವ ಕಣ್ಣೀರಿಗೆ ತತ್ವಜ್ಞಾನದ ಸಮಾಧಾನ ಕೊಟ್ಟು ಕಣ್ಣೊರೆಸಿಕೊಳ್ಳಬಹುದು. ಆದರೆ ಕರುಳಬಳ್ಳಿಯ ನೋವಿಗೆ ಯಾವುದು ತಾನೇ ಸಾಂತ್ವಾನ ನೀಡಿಯಾವು?

ಕವಿತೆಗೆ ಧನ್ಯವಾದ!.

ಮೌನ ಆಕ್ರಂದನದಲ್ಲೂ ಅರಳುವ ಆಸೆ!

ಕೆಲವು ಕವನಗಳಿಗೆ ಅಭಿಪ್ರಾಯ ಮಂಡನೆ ಮಾಡುವುದು ಕಷ್ಟ ಸಾಧ್ಯದ ಕೆಲಸ. ಕವನದ ಭಾವವನ್ನು ಸಂಪೂರ್ಣವಾಗಿ ಅರಿಯದೆ ಅದರ ಬಗ್ಗೆ ಟಿಪ್ಪಣಿಸುವುದು ತರವೂ ಅಲ್ಲ. ಆದರೆ ಕವನದ ಅಭಿವ್ಯಕ್ತಿ ಶೈಲಿಯ ಬಗ್ಗೆ ಎರಡು ಮಾತಿಲ್ಲ! ಮಮತೆಗೆ ಬೀಳುವ ಪೆಟ್ಟಿನ ದ್ಯೋತಕವಾಗಿ ನನಗೆ ಈ ಕವನ ಗೋಚರವಾಗುತ್ತಿದೆ. ಮೃತ್ಯುವಿನ ವಿಕಟ ನರ್ತನವನ್ನು ರೋದಿಸುತ್ತಿರುವ ಕವನ! ದೇಹವೆಂಬುದು ದಿನೇ ದಿನೇ ಸವೆಯುತ್ತಿರುವ ಗಡಿಗೆ! ಇದು ಸವೆಯುತ್ತಿರುವುದು ದೇಹದ ಒಳಗಿನಿಂದಲೇ! ಎಂದು ಬಿರುಕು ಬಿಟ್ಟು ಒಡೆಯುವುದೋ ತಿಳಿಯದು!
ದಾಸರ ಒಂದು ಪ್ರಸಿದ್ಧ ಕೃತಿಯಿದೆ "ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ" - ಈ ಹಾಡನ್ನು ಬಹಳವಾಗಿ ನನಗೆ ನೆನಪಿಗೆ ತರಿಸಿತು ಈ ಕವನ. ಕೆಲವು ವಿಚಾರಗಳನ್ನು ಬಹಳ ಮಾರ್ಮಿಕವಾಗಿ ಇಲ್ಲಿ ಮುಂದಿಟ್ಟಿದ್ದಾರೆ. "ಕರಡು ಪ್ರತಿ"ಯೆಂದು ನಶಿಸುತ್ತಿರುವ ಜೀವವನ್ನು ಸಂಬೋಧಿಸುವುದು ಅತ್ಯಂತ ಅರ್ಥಗರ್ಭಿತವಾಗಿದೆ. ಇಷ್ಟಾಗ್ಯೂ ಬದುಕಿನ ಆಸೆಯನ್ನು ಕೈಬಿಡದೆ - ಜನನ ಮರಣಗಳನ್ನು ನಿತ್ಯಸತ್ಯವೆಂದು ಅರಿತು, ಆ ಅರಿವಿನಲ್ಲಿ ಸಾಂತ್ವನವನ್ನು ಕಾಣುವ ಪ್ರಯತ್ನ ಶ್ಲಾಘನೀಯ! ಕಣ್ಣು ಕಾಣದ್ದೂ ತಾಯಿಯ ಕರುಳು ಕಾಣುತ್ತದೆಯಂತೆ. ಬಹುಶಃ ಈ ಅರ್ಥದಲ್ಲಿ - "ಕರುಳಿಗಿಲ್ಲದ ಕಣ್ಣ ಮಬ್ಬು" ಈ ಸಾಲನ್ನು ಮನಗಂಡಿದ್ದೇನೆ! ಇದು ಸರಿಯೋ ಇಲ್ಲವೋ ತಿಳಿಯದು. ಅಂಥ ತಾಯ್ಗರುಳಿಗೆ ಜೀವನದ ಸತ್ಯದ ಅರಿವೊಂದೇ ಸಮಾಧಾನವನ್ನು ನೀಡುವುದೆಂದು ಸಾರುತ್ತದೆ ಕವನ. ಇಂಥ ಅರ್ಥಪೂರ್ಣ ಕವನಗಳು ಇನ್ನೂ ಮೂಡಿ ಬರಲಿ ಎಂದು ಆಶಿಸುತ್ತೇನೆ!