ಶಾಸ್ತ್ರಗಳಲ್ಲಿ ಒಂದು ಸಂದರ್ಭ: ಚಂದ್ರನಿಗೆ ಕಳಾಹೀನನಾಗುವಂತೆ ಶಾಪ ಬಂದಾಗ (ಯಾರು, ಯಾವಾಗ ಎನ್ನುವುದು ನನಗೆ ನೆನಪಿಲ್ಲ) ಸೃಷ್ಠಿಯ ಜೀವರೂ ಕಳೆಗುಂದಿದವು. ಹೂವುಗಳು ಅರಳಲಿಲ್ಲ, ಸಸ್ಯ ಚಿಗುರೊಡೆಯಲಿಲ್ಲ, ಪಶು-ಪಕ್ಷಿಗಳು ಸಂತಾನ ಪ್ರಾಪ್ತಿಯ ಶಕ್ತಿ ಕಳೆದುಕೊಂಡುವು. ಚಂದ್ರ, ಈಶ್ವರನ ಕುರಿತು ತಪಸ್ಸು ಮಾಡಿದಾಗ, ಪಕ್ಷಗಳವರೆಗೆ ಕಳೆಗುಂದುವ ಮತ್ತೆ ಪಕ್ಷಗಳವರೆಗೆ ಕಳೆಹೊಂದುವ ವರ ಪಡೆದುಕೊಂಡ. ಹೀಗೆ ತಿಂಗಳಿಗೊಮ್ಮೆ ಸಂಪೂರ್ಣವಾಗಿ ಕಳೆಹೊಂದಿ ಬೆಳಗುತ್ತಾನೆ. ಪ್ರಕೃತಿ ಮೈನೆರೆಯಿತು; ಸೃಷ್ಠಿ ಪ್ರಕ್ರಿಯೆ ಮತ್ತೆ ಪ್ರಾರಂಭವಾಯಿತು. ಅಂತೂ ನಮ್ಮಲ್ಲಿ ಚಂದ್ರ ಕಳೆ ಕೀಲುವವನು ಎನ್ನುವ ನಂಬಿಕೆ ಇದೆ.
ಇದರ ಪ್ರಭಾವದಿಂದಲೋ ಏನೋ ಮೂರು ವರ್ಷದ ಹಿಂದೊಮ್ಮೆ ಪೌರ್ಣಮಿಯ ರಾತ್ರಿ ನನಗೆ ಈ ಕವಿತೆ ಹೊಳೆಯಿತು:
ಚಂದಿರನು ಬೆಳದಿಂಗಳ ಬಲೆ ಬೀಸುತಿಹನು
ಯಾವ ಸಖಿಗೋ ಪ್ರಣಯ ಗೀತೆ ಹಾಡುತಿಹನು
ಮುಗಿಲು ಮುತ್ತಿಕ್ಕಲು ಮುಗಿಬೀಳುತಿದೆ
ರಾಸಲೀಲೆಗೆ ಸಮಯ ಸಜ್ಜಾಗುತಿದೆ
ತಂಪಾದ ತುಟಿಗಳಿಂದ
ಕೆಂಪು ದೇಹದ ಮೇಲೆ ಚುಕ್ಕಿಗಳ ಮೂಡಿಸುತ
ಬಯಕೆಯ ಬೆಂಕಿ ಆರಿಸುತ
ಪ್ರೇಮಪುಷ್ಪದ ಕಂಪು ಬೀರುತಿಹನು
ಬಲೆಗೆ ಸಿಲುಕಿ ಬಳುಕಾಡಿದ ಮೇಲೆ
ಉಸಿರಿನ ಬಿಗಿ ಸಡಿಲಾಯಿತು
ತಂಗಾಳಿಯಲಿ ತೇಲಿ ಹಾಯಾದವು ಮುಗಿಲು!
ಒಡಲೊಳಗಿನ ಪ್ರೀತಿ ಅಮೃತದ ಹನಿಯಾಯಿತು
ಧರೆ ಸೇರಿತು ಪ್ರೀತಿ ಮಳೆಯಾಗಿ
ಚಿಗುರೊಡೆಯಿತು ಪ್ರೀತಿ ಹಸಿರಾಗಿ
ಬೆರೆಯಿತು ಪುರುಷನ ರಸವಾಗಿ
ಹೆಣ್ಣೊಳು ಅರಳಿತು ಮಗುವಾಗಿ!
ಇಲ್ಲಿ ಮೋಡಗಳನ್ನು ಸೆಳೆಯಲು ಚಂದ್ರ ಬೆಳದಿಂಗಳನ್ನು ಬಳಸುವ, ಅವುಗಳೊಂದಿಗಿನ ಪ್ರಣಯ, ಆ ಕ್ರಿಯೆಯಲ್ಲಿ ಮೋಡಗಳ ಸಂಘರ್ಷದಿಂದಾಗಿ ಮಳೆ ಎನ್ನುವ ಕಲ್ಪನೆ, ಅದಕ್ಕೆ ಕನ್ನಡಿಯಾಗಿ ಇಲ್ಲಿನ ಪ್ರಣಯ. ಹೀಗೆ ಆ ಪ್ರೀತಿ ಎನ್ನುವುದು ಮಳೆ-ಬೆಳೆ-ರೇತಸ್ಸು-ಜೀವವಾಗಿ ಪರಿಣಾಮ ಹೊಂದುವ ಚಿತ್ರಣವಿದೆ.
ಅದಕ್ಕೂ ಹಿಂದೆ ಹೊಳೆದ ಇನ್ನೊಂದು:
ಕತ್ತಲ ಮನೆಯೊಳಗೆ
ಹದಿನೈದು ದಿನಗಳ ನಂತರ
ಸಿಂಗಾರ ಮುಗಿಸಿದ
ಚಂದ್ರಮನ ಕಿರುನಗೆ- ಬೆಳದಿಂಗಳು!
ಮೊನ್ನೆ ವರಕವಿ ಬೇಂದ್ರೆಯವರ ಜನ್ಮದಿನದ ಅಂಗವಾಗಿ ಅವರದೊಂದು ಕವಿತೆ "ಅರಗಿಸಿಕೊಳ್ಳುವ" ಬಯಕೆ ಮೂಡಿದಾಗ kannadalyrics.com ನಲ್ಲಿ ಕಾಣಿಸಿದ ಕವಿತೆ "ಅನಂತ ಪ್ರಣಯ". ಸಿನಿಮಾ ಒಂದರಲ್ಲಿ ಮುಸ್ಸಂಜೆಯ ಸಂದರ್ಭಕ್ಕೆ ಬಳಸಿಕೊಂಡ ಹಾಡದು ('ಉತ್ತರ ದ್ರುವದಿಂ ದಕ್ಷಿಣ ದ್ರುವಕು....'). ಉದಾಸೀನದಿಂದಲೇ ಓದಿಕೊಂಡೆ. ನಂತರ ಅದರಿಂದ ಹೊರಬರಲಾಗಲಿಲ್ಲ.
ಸೂರ್ಯನ ಪ್ರಭಾವದಿಂದಲೇ ಚಂದ್ರನ ಬೆಳಕು. ಹಾಗೆ ಸೂರ್‍ಯನ ಬಿಂಬಕ್ಕೆ ಚಂದ್ರನ ಬಿಂಬ ಸೇರಿ ರಮಿಸಿದಾಗ ನಕ್ಕ ನಗೆಯೇ ಬೆಳದಿಂಗಳು. ಆ ಬೆಳದಿಂಗಳಿನಲ್ಲಿ ಪ್ರಪಂಚ ಮೀಯುತ್ತಿದೆ. ಈ ಮಿಲಮಹೋತ್ಸವಕ್ಕೆ ಚಂದ್ರ ಆರಿಸಿಕೊಂಡ ವೇದಿಕೆ- ಭೂಮಿ. ತನ್ನ ಮಿತ್ರನ ಮೈತ್ರಿಯ ಶುಭ ಘಳಿಗೆಯ ಹರ್ಷೋದ್ವೇಗದಲ್ಲಿ ಮೈಮರೆಯದೆ, ಮೈನೆರೆತು ಸೃಷ್ಠಿಯಲ್ಲಿ ತೊಡಗಳು ಚಂದ್ರನೆಡೆಗೆ ಕಾತರದಿಂದ ನೋಡುತ್ತಿರುವ ಭೂಮಿಯ ಮೇಲಿನ ಕರುಣೆಯಿಂದ ಚಂದ್ರನು ಅಮೃತಧಾರೆಯಂತಹ ಬೆಳದಿಂಗಳನ್ನು ಲೇಪಿಸಿದನು. ಇದರಿಂದಾಗಿ ಭುವನದ ಹೂವುಗಳು ಅರಳಿದವು, ಪ್ರ್‍ಅಕೃತಿ ಪುಳಕಿಸಿತು, ಚೈತ್ರಾದಿ ಮಾಸಗಳು ಮರಳಿ ಮರಳಿ ಬಂದು ಕೋಟಿ ಕೋಟಿ ಬಾರಿ ಈ ಚಕ್ರದೊಳಗೆ ಭೂಮಿ ಹೊಸೆದುಕೊಂಡಿತು. ಹೀಗೆ, "ತಿಂಗಳು ತಿಂಗಳು" ಸವೆಯುತ್ತ ಸಾಗಿದೆ. ಆ ತಿಂಗಳು(ಚಂದ್ರ) ಒಂದು ಪಕ್ಷದಲ್ಲಿ ತುಂಬುತ್ತಾನೆ, ತುಳುಕುತ್ತಾನೆ. ಇನ್ನೊಂದು ಪಕ್ಷದಲ್ಲಿ ತೀರುತ್ತಾನೆ.
ಭೂಮಿಯಲ್ಲಿನ ಮಿಲನ ಪ್ರಕ್ರಿಯೆಗೆ ಚಾಲನೆ ಕೊಡುವ ಸೂರ್‍ಯ-ಚಂದ್ರರ ಮಿಲನವನ್ನು ನೋಡುವ ತವಕದಲ್ಲಿ ನಕ್ಷತ್ರ ಸಮೂಹ ಅತ್ತಿತ್ತ ತಿರುಗದೆ, ಎವೆಯಿಕ್ಕದೆ ನಿಂತಿದೆ. ಆದರೆ ಇದುವರೆವಿಗೂ ಚಂದ್ರನ ದೇಹದ ಕೆಳಭಾಗದಲ್ಲಿ ಮಿಲನ ಹೊಂದಿರುವ ಯಾವ ಗುರುತುಗಳೂ ಕಾಣಿಸುತ್ತಿಲ್ಲ. ಅಷ್ಟು ಗೋಪ್ಯವಾಗಿ ಅದು ನಡೆದು ಸಾಗಿದೆ.
ಸಿನಿಮಾದಲ್ಲಿ ಹಾಡು ಕೇಳಿದಾಗ ಈ ರೀತಿಯ ಅರ್ಥ ಎಂದೂ ಹೊಳೆದಿರಲಿಲ್ಲ. ಅಲ್ಲಿ ಕಾಣುತ್ತಿದ್ದದ್ದು ಮುಸ್ಸಂಜೆಯ ನೋಟ. ಸಾಹಿತ್ಯದ ಬಗ್ಗೆ ಗಮನವೇ ಇರುತ್ತಿರಲಿಲ್ಲ. ಆದರಿದು ಸೂರ್ಯ-ಚಂದ್ರರ ಮಿಲನದ ಸಂದರ್ಭವನ್ನಲ್ಲದೆ ಅದರ ಪರಿಣಾಮವಾದ ಬೆಳದಿಂಗಳ ಮಹಿಮೆಯನ್ನೇ ಮುಖ್ಯವಾಗಿ ಸಾರುತ್ತಿರುವ ಕವಿತೆ ಎನಿಸುತ್ತದೆ. ನಿಮಗೂ ಹೀಗೇ ಅನಿಸಿದೆಯೇ?. ಈ ಕವಿತೆ ನಿಮಗೆ ಈ ರೀತಿಯೇ ಹೊಳೆದಿತ್ತೇ ಅಥವಾ ಬೇರಾವ ಅರ್ಥ ಹೊರಡಿಸುತ್ತಿದೆ?. ಇನ್ನು ಹೇಗೇಗೆಲ್ಲ ಹೊಳೆದಿತ್ತು?. ನಾನು ನನ್ನ ಕವಿತೆಯ ಮಾರ್ಗದಲ್ಲಿ ಈ ಕವಿತೆಯನ್ನು ಗುರುತಿಸುತ್ತಿದ್ದೇನೆಯೇ ಅಥವಾ ಎರಡೂ ಕವಿತೆಗಳಿಗೆ ನಂಟಿದಿಯೇ?.