ಕವನ: ಅಗಲಿ ಹೋದವರು - ವಾಣಿ ರಾಮದಾಸ್

ವಾಣಿ ರಾಮದಾಸ್ ಅವರು ಸಿಂಗಪೂರಿನಲ್ಲಿ ವಾಸವಾಗಿದ್ದಾರೆ. ಕವನಗಳನ್ನು ಬರೆಯುವುದು ಇವರ ಹವ್ಯಾಸ. ಇವರ ಈ ಕವನದ ಶೀರ್ಷಿಕೆ - ಅಗಲಿ ಹೋದವರು.

ಹೋದವರು ಹೊರಟೇ ಹೋಗುತ್ತಾರೆ
ಒಮ್ಮೆಯೂ ನಮ್ಮತ್ತ ನೋಡದೆ
ಬಲು ದೂರದ ಊರಿಗೆ|

ಚಣ ಚಣವು ಕಾಡುವುದು
ಕದರುವುದು ಅವರ ನೆನಪು
ಅದನು ತಡೆಯಲಾರದೆ ನಿಂದ ನಮಗೆ||

ಕಲೆತು, ನಲಿದು, ನಕ್ಕ
ಕ್ಷಣಗಳ ನೆನಪುಗಳ ಸರಮಾಲೆ
ಮರುಕಳಿಸಿ ಬರುವುದು ದಿನ ದಿನವೂ|

ಆಲಿಸಿದ ಧ್ವನಿ ತರಂಗಗಳು
ಮಾರ್ದನಿಸುತ ಉಲಿಯುವುದು
ಕಿವಿಗಳಲಿ ನಿಮಿಷ ನಿಮಿಷವೂ||

ನಿತ್ಯ ನಡೆಯ ಹಾದಿಯಲ್ಲಿ
ವಸ್ತು ವಾಸ್ತುಗಳಲ್ಲಿ
ಮೆಟ್ಟಿ ನಿಂತಿದೆ ಅವರ ರೂಪ|

ತವಕಿಸಿ, ತಲ್ಲಣಿಸಿ
ನೋವಿನಲಿ ಬೇಡುವುದು ಮನ
ಒಂದು ಬಾರಿ ತೋರಬಾರದೇ ನಿನ್ನ ನಿಜರೂಪ||

ನೋಟ ಹರಿದಷ್ಟೂ ಕಾಣುವುದು
ಎಡೆಬಿಡದೆ ಕಾಡುವುದು
ನೀರವ, ನಿರಾಶೆಯ ಬಾಡು|

ಮೂಕ ರಾಗ ಹಾಡುವುದು
ಸಂಕಟದಿ ನರಳುವುದು
ಇಲ್ಲಿ ಉಳಿದವರ ಮನದ ಪಾಡು||

ಔಷಧಿಯೇ ಇಲ್ಲದ ನೋವುಗಳು
ವಾಸಿಯಾಗದ ಬಾವುಗಳು
ಮರುಗಿ ಕೊರಗಿ ನಿತ್ಯ ಸಾಯುವರು ಇಲ್ಲಿ|

ಬಲು ಕಠಿಣದಲಿ ಜೀವನ ನಡೆಸುವರು
ನಡೆಯಲಾಗದೆ ಹಿಂದೆ ನಿಂದವರು
ಹೊರಟು ಹೋದವರ ನೆನೆಯುತ್ತ||

ಇಲ್ಲಿ ಕೇಳು ನನ್ನ ಮಿತ್ರ,
ಹೋದವರಿಗೆ ಇದರ ಅರಿವು ಇಲ್ಲ ಮಾತ್ರ
ಬದುಕುಳಿದವರಿಗೆ ಆ ನೋವು ಯುಗ ಗಾತ್ರ||