ಕವನ: ಸಪ್ತಪದಿ - ವಾಣಿ ರಾಮದಾಸ್

ಮಾಂಗಲ್ಯಂ ತಂತು ನಾನೇನಾ ಮುಗಿದು
ನಿನ್ನ ಕರ ಪಿಡಿದು ನಾ ನಡೆದೆ
ನವ ಜೀವನದ ಸಪ್ತಪದಿಯನಿಡಲು!!

ನಾವಿಡುವ ಮೊದಲ ಹೆಜ್ಜೆ
ಈ ಜೀವನ ಸತ್ವದ ಪೋಷಣೆಗಾಗಿ
ಕೂಡುತ ಸಾಗೋಣ ಬಾ ಚೆಲುವೇ, ಮುಂಬರುವ ದಿನಗಳಲಿ!!
ಮುಂದೆ ಓದಿ

ನಮ್ಮಯ ಹುರುಪು, ಚೈತನ್ಯ, ಶಕ್ತಿ, ತೇಜಸ್ಸು
ಅಡಗಿದೆ ನಾವಿಡುವ ಎರಡನೆಯ ಹೆಜ್ಜೆಯಲಿ
ಎಲ್ಲರ ಆಶೀರ್ವಾದ ಹಾರೈಕೆಗಳು ನಮಗಿರಲಿ!!

ಮೂರನೆಯ ಹೆಜ್ಜೆಗೆ ಜೊತೆ ನೀಡು, ಮನದರಸಿ
ಧನಕನಕ, ವೈಭೋಗ, ಅಭಿವೃದ್ಧಿಗಾಗಿ,
ಆ ಭಗವಂತನ ದಯೆಯಿರಲಿ !!

ಸಂಸಾರ ಸೌಖ್ಯವರ್ಧನೆಗೆ
ಅನುಸರಿಸಿ ನನ್ನನು ಬಾ ನಲ್ಲೆ
ನಾಲ್ಕನೆಯ ಹೆಜ್ಜೆಯನಿಟ್ಟು ಜೊತೆಯಾಗಿ ಸಾಗೋಣ!!

ವಂಶಾಭಿವೃದ್ದಿಗೆ, ಮನೆತನವ ಬೆಳೆಸಲು
ಐದನೆಯ ಹೆಜ್ಜೆಯ ಜೊತೆಗಿಡು ಮನದನ್ನೆ
ಸಂತಾನ ಲಕುಮಿಯ ಕರುಣೆ ನಮ್ಮ ಮೇಲಿರಲಿ!!

ಆರನೆಯ ಹೆಜ್ಜೆಯಲಿ ಋತುಗುಣಗಳಿಗೆ ತಕ್ಕಂತೆ
ಸಮಯಾನುಕೂಲಿಗಳಾಗಿ ಜೀವನವ ಅನುಸರಿಸುತ
ನಡೆಯುವಾ ಎನ್ನುಸಿರೇ, ಹಲ ಜನುಮಗಳಲೀ!!

ಏಳನೆಯ ಹೆಜ್ಜೆಯಿಟ್ಟು ಸಖಿಯಾಗು,
ನಲ್ಮೆಯಿಂದೊಡಗೂಡು, ಜೀವ ಸಂಗಾತಿಯಾಗು
ಒಂದಾಗಿ ಸಾಗೋಣ ಬಾ, ಈ ಜೀವನ ಯಾತ್ರೆಯಲೀ!!

ಜೀವನದ ಏಳು

ಜೀವನದ ಏಳು ಹೆಜ್ಜೆಗಳನ್ನು ಚಿಕ್ಕ ಕವನದಲ್ಲಿ ಬಹಳ ಚೆನ್ನಾಗಿ ಹಿಡಿದಿಟ್ಟಿದ್ದೀರಿ. ಧನ್ಯವಾದಗಳು.

ಇಂತಿ ವಿಶ್ವಾಸದ ವಂದನೆಗಳೊಂದಿಗೆ
---
ತ.ವಿ.ಶ್ರೀನಿವಾಸ

ಕವನ - ಸಪ್ತಪದಿ

ವಾಣಿಯವರ ಸಪ್ತಪದಿ ಕವನ, ಹಿಂದೆ ಶ್ರೀ ಮತಿಘಟ್ಟ ಕೃಷ್ಣಮೂರ್ತಿಯವರು ಬರೆದ 'ಸಪ್ತಪದಿ'ಎಂಬ ಕವನದ ನೆನಪು ತಂದುಕೊಟ್ಟಿತು. ಆದು ಹೀಗಿದೆ:
ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು
ಅನುಸರಿಸುತಲೆನ್ನ ಬಾ ಗೆಳತೀ ||ಪ||
ಮನಸು ಮಾತು ಕಾರ್ಯಗಳಲ್ಲಿ
ಭಿನ್ನತೆ ಇರದಿರಲಿ - ನಮ್ಮೊಳು
ಏಕತೆ ಮೂಡಿರಲಿ ||ಅನು ಪ||
ಅನ್ನ ಬ್ರಹ್ಮವನಾರಾಧಿಸಲು
ಹೆಜ್ಜೆಯನೊಂದನು ಇಡು ನೀನು;
ಆತ್ಮಶಕ್ತಿಯ ಪಡೆವುದಕಾಗಿ
ಎರಡನೆ ಹೆಜ್ಜೆಯನಿಡು ಗೆಳತೀ.
ಧರ್ಮ ಮಾರ್ಗದಿ ಸಿರಿ ಸಂಪದವನು
ಗಳಿಸಲು ಮೂರನೆ ಹೆಜ್ಜೆಯಿಡು;
ಬಂಧು ಜನರೊಳು ಮಮತೆಯ ಗಳಿಸಲು
ನಾಲ್ಕನೆ ಹೆಜ್ಜೆಯನಿಡು ಗೆಳತೀ.
ಮಕ್ಕಳ ಪಡೆದು ವಂಶವ ಬೆಲೆಸಲು
ಐದನೆ ಹೆಜ್ಜೆಯನಿಡು ನೀನು;
ಧರ್ಮವ ಸಾಧಿಸಿ, ಪುಣ್ಯವ ಗಳಿಸಲು
ಆರನೆ ಹೆಜ್ಜೆಯನಿಡು ಗೆಳತೀ;
ಪ್ರಿಯ ಸಖಿಯಾಗಿ ಜೊತೆಗಿಹೆನೆಂದು
ಏಳನೆ ಹೆಜ್ಜೆಯನಿಡು ಗೆಳತೀ.
ಏಳು ಅಕ್ಕಿ ರಾಶಿಗಳನ್ನು ದಂಪತಿಗಳು ಕೂಡಿ ದಾಟಿ ಬರುವುದು, ದಾಂಪತ್ಯದಲ್ಲಿ ಸಹಬಾಳ್ವಿಕೆ ಮಾಡಿಯೇ ಸುಖ ಸಾಧಿಸಬೇಕೆನ್ನುವುದಕ್ಕೆ ಒಂದು ಸಾಂಕೇತಿಕ ವಿಧಿ. ಇಲ್ಲಿ ಎದ್ದು ಕಾಣುವುದು ಗಂಡ-ಹೆಂಡಿರಿಬ್ಬರೂ ಸ್ನೇಹಿತರಾಗಿ, ಜೊತೆ-ಜೊತೆಯಾಗಿಯೇ ಜೀವನ ಯಾತ್ರೆಯಲ್ಲಿ ಎದುರಾಗುವ ಕಷ್ಟ-ಸುಖಗಳನ್ನು ಅನುಭವಿಸುವ ಹಾರೈಕೆ. ವಾಣಿಯವರ ಕವನದಲ್ಲಿ ಇದು ಚೆನ್ನಾಗಿ ಮೂಡಿಬಂದಿದೆ. ಈ ಕವನದ ಮೇಲೆ ಹೆಚ್ಚಿನ ವ್ಯಾಖ್ಯಾಗಳನ್ನು ನಾನು ನಿರೀಕ್ಷಿಸುತ್ತಿದ್ದೇನೆ. ಹಾಗೆಯೇ, ಇನ್ನಿತರರು ಸಪ್ತಪದಿಯ ಮೇಲೆ ಬರೆದ ಕವನಗಳನ್ನೂ ತಿಳಿದವರು ನಮ್ಮೊಡನೆ ಹಂಚಿಕೊಳ್ಳಬೇಕೆಂದೂ ಕೋರುತ್ತಿದ್ದೇನೆ. - ಆಹಿತಾನಲ