ಕವನ: ಮರೆಯಲಾರದ ನೆನಪುಗಳು - ಪ್ರವೀಣ್ ಶಿವಶಂಕರ್

ಇಂದೇಕೆ ಮನದಲ್ಲಿ ಮಾರ್ದನಿಪ ನೀರವತೆ ?
ಸಂತೆ ಮಧ್ಯದಿ ಸೂಸಿ ಬಂದಿಹುದು ನಿರ್ಜನತೆ !
ಎಲ್ಲರೂ ಇದ್ದು ಇರದಿರುವಂದದ ಏಕಾಂತ
ಇರುವಿಕೆಯೇ ಸೂಳ್ಪಡೆವ ನವ ವಾದ ಸಿದ್ಧಾಂತ
ಮುಂದೆ ಓದಿ

ಯಾವುದೋ ಒಂದು ನೆನಪಿಂದು ಮರುಕಳಿಸಿ
ತಂದಿಹುದು ಭೂತದ ಆತ್ಮಗಳ ಮೇಳವಿಸಿ
ಗತದಂಧಕಾರದಲಿ ಮೌನಗಳ ಉಕ್ಕಿನಲಿ
ಬಿಗಿದಿದ್ದ ನೆನಹುಗಳು ಸೇರಿಹವು ಬಾನಿನಲಿ !

ತೋರ್ವಿಕೆಗೆ ಕಾಣ್ಬ ನಗುವಿನಾ ಸೂರ್ಯ ಇನ್ನಿಲ್ಲ
ಒಂಟಿತನದ ಕಾರ್ಮೋಡ ಕವಿದಿಹುದು ಬಾನೆಲ್ಲ !
ನಯನದ ಕಟ್ಟಳೆಗಳ ಮೀರಿ ಹರಿವ ನೀರು ತಾ ನಿಲಲಿಲ್ಲ.
ಜೊತೆಗಿರುವೆವೆಂದೆಂದು ಹೇಳಿದ್ದೆ ನೀನು...... ಇಂದೇಕೆ ಬಳಿಯಿಲ್ಲ ?

- ಪ್ರವೀಣ್ ಶಿವಶಂಕರ್