ಮಾರ್ಚ್ ೧೭ ಕನ್ನಡ ಸಾರಸ್ವತ ಲೋಕದ ಇಬ್ಬರು ಧೀಮಂತರು ಜನಿಸಿದ ದಿನಾಂಕ. ಇವರುಗಳು, ಶ್ರೀ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯರು (ಪು.ತಿ.ನ), ಹಾಗು ಶ್ರೀ ಡಿ.ವಿ.ಗುಂಡಪ್ಪನವರು (ಡಿ.ವಿ.ಜಿ).
ಪು.ತಿ.ನ ಹುಟ್ಟಿದ್ದು ೧೯೦೫, ಮಾರ್ಚ್ ೧೭ರಂದು ಮೇಲುಕೋಟೆಯಲ್ಲಿ. ಕನ್ನಡ ಸಾಹಿತ್ಯದಲ್ಲಿ ಗೀತ ರೂಪಕಗಳೆಂಬ ವಿಶಿಷ್ಟ ಪ್ರಕಾರವನ್ನು ಪ್ರಚಲನಕ್ಕೆ ತಂದವರು ಪು.ತಿ.ನ. ಈ ಪ್ರಕಾರದ ರಚನೆಗಳು ಹಾಡಲಷ್ಟೇ ಅಲ್ಲದೆ, ಅಭಿನಯಿಸಲೂ ಸಹ ಯೋಗ್ಯವಾಗಿದ್ದವು. ನಮ್ಮ ಪುರಾಣಗಳ, ಹಾಗೂ ಪೌರಾಣಿಕ ಗ್ರಂಥಗಳ ಪಾತ್ರಗಳನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಚಿತ್ರಿಸಿದರು. ಅಹಲ್ಯೆ, ಶಬರಿ, ಕೃಷ್ಣ ಲೇಲೆಯ ವಿವಿಧ ಸಂದರ್ಭಗಳನ್ನಷ್ಟೇ ಅಲ್ಲದೆ, ಪ್ರಾಕೃತಿಕ ಸೌಂದರ್ಯವನ್ನೂ ತಮ್ಮ ವಾಗ್ಝರಿಯಲ್ಲಿ ಹರಿಸಿದರು. ಇವರ ಕೃತಿಗಳು:
ಅಹಲ್ಯೆ, ಶಬರಿ, ಸತ್ಯ ಹರಿಶ್ಚಂದ್ರ - ನಾಟಕಗಳು
ದ್ರೋಹಿಯ ಬಿನದ, ವಿಕಟಕವಿಯ ವಿಜಯ, ಗಣೇಶ ದರ್ಶನ, ರಸ ಸರಸ್ವತಿ, ಮಲೆ ದೇಗುಲ - ಭಾವಗೀತೆಗಳ ಸಂಗ್ರಹ.
ಇವರ ಹಂಸ ದಮಯಂತಿ ಮತ್ತು ಇತರ ರೂಪಕಗಳು ಗ್ರಂಥಕ್ಕೆ ೧೯೬೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.
ಇವರ ಶ್ರೀ ಹರಿ ಚರಿತೆ ಕೃತಿಗೆ - ಪಂಪ ಪ್ರಶಸ್ತಿಯೂ ದೊರಕಿದೆ.
"ಮಂಕುತಿಮ್ಮನ ಕಗ್ಗ" ಕನ್ನಡದ ವೇದವೆಂದೇ ಪ್ರಸಿದ್ದಿಯನ್ನು ಪಡೆದಿದೆ. ಇದನ್ನು ಬರೆದು, ಜೀವನಕ್ಕೆ ಬೇಕಾದ ಸಕಲ ಆದರ್ಶಗಳನ್ನು ಒಂದೇ ಕಡೆಯಲ್ಲಿ ಸಮೀಕರಿಸಿ ಕಾಲದ ಪರಿಮಿತಿಗಳನ್ನೂ ಮೀರಿ ನಿಲ್ಲುವಂಥ ಅಧ್ಬುತ ಕೃತಿಯನ್ನು ನಮಗೆ ಕೊಟ್ಟವರು ಶ್ರೀ ಡಿ.ವಿ.ಗುಂಡಪ್ಪನವರು. ಇವರು ೧೦ನೇ ತರಗತಿಯವರೆವಿಗೂ ಓದಿದ್ದರೂ, ತಮ್ಮ ಸ್ವಪ್ರಯತ್ನದಿಂದ ಕನ್ನಡವಲ್ಲದೆ, ಸಂಸ್ಕೃತ, ಹಾಗೂ ಆಂಗ್ಲ ಭಾಷೆಯಲ್ಲಿ ಅಸಾಧಾರಣ ಪಾಂಡಿತ್ಯವನ್ನು ಗಳಿಸಿದರು.
ಇವರ ಇತರೆ ಕೃತಿಗಳು:
ವಸಂತ ಕುಸುಮಾಂಜಲಿ, ನಿವೇದನ, ಅಂತಃಪುರ ಗೀತೆಗಳು - ಕಾವ್ಯ ಸಂಕಲನಗಳು
ರಂಗಾಚಾರ್ಯ, ಗೋಪಾಲಕೃಷ್ಣ ಗೋಖಲೆ, ವಿದ್ಯಾರಣ್ಯರು ಮತ್ತು ಅವರ ಸಮಕಾಲೀನರು, ಜ್ಞಾಪಕ ಚಿತ್ರಶಾಲೆ, ಶ್ರೀ ಮಧ್ಬಗವದ್ಗೀತಾ ತಾತ್ಪರ್ಯ, ಜೀವನ ಧರ್ಮ ಯೋಗ - ಗದ್ಯ ಕೃತಿಗಳು.
ಒಮರನ ಒಸಗೆ - ಒಮರ್ ಖಯ್ಯಾಮ್ ನ ಭಾಷಾನುವಾದ
ಇವರ ಜೀವನ ಧರ್ಮ ಯೋಗ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.