ಗಾಳಿಯೊಳುಸಿರಾಡಿ ನಮ್ಮೆದೆಗೆಚ್ಚರವ ತರುತಿರು ಕೊಳಲೇ – ಭಾಗ ೧

ಸೂ: ಪು.ತಿ.ನ. ರಚಿಸಿರುವ ‘ಗೋಕುಲ ನಿರ್ಗಮನ’ ಗೀತ ನಾಟಕದ ಕುರಿತು ಆಹಿತಾನಲರ ಈ ಲೇಖನ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ "ಸ್ವರ್ಣ ಸೇತು" - ೨೦೦೫ನೆ ಸಾಲಿನ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಪು.ತಿ.ನ. ಜನ್ಮದಿನದ ಸಂದರ್ಭದಲ್ಲಿ ಇದನ್ನು ನಾಲ್ಕು ಭಾಗಗಳಲ್ಲಿ ಪ್ರಕಟಿಸಲಾಗುವುದು. ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕಾಗಿ ವಿನಂತಿ – ಸಂ.

ಮೊದಲಮಾತು:

ಸಾಹಿತ್ಯ ಪ್ರಕಾರಗಳಲ್ಲಿ ಗೀತ ನಾಟಕ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ಗೀತ ನಾಟಕಗಳನ್ನು ಎಣಿಸಿದಾಗಲೆಲ್ಲ ನನ್ನ ಮನಸ್ಸಿಗೆ ಶಿವರಾಮ ಕಾರಂತ ಮತ್ತು ಪು. ತಿ. ನ. ರ ಹೆಸರು ಥಟ್ಟನೆ ಬರುತ್ತದೆ. ಶ್ರೀ ಕಾರಂತರ `ಮುಕ್ತದ್ವಾರ' (೧೯೩೦), `ಕಿಸಾ ಗೌತಮಿ' (೧೯೪೦), ಮೊದಲಾದ ಗೀತ ನಾಟಕಗಳು ಅವರದೇ ನಿರ್ದೇಶನದ ಮೂಲಕ ರಂಗಭೂಮಿಯಲ್ಲಿ ಯಶಸ್ಸು ಪಡೆದಿವೆ. ಪು.ತಿ.ನ. ಅವರ `ಅಹಲ್ಯೆ' (೧೯೪೧), `ಗೋಕುಲ ನಿರ್ಗಮನ' (೧೯೪೫) ಮೊದಲಾದ ಗೀತ ರೂಪಕಗಳಂತೂ ಅಪಾರ ಜನಪ್ರಿಯತೆ ಗಳಿಸಿವೆ. ನಾಟಕದಲ್ಲಿ ಸಂಗೀತ ಮಾಧ್ಯಮ ಬಳಸಿದಾಗ ಪ್ರೇಕ್ಷಕರಲ್ಲೊಂದು ಅಪೂರ್ವ ಅನುಭವ ಮೂಡುತ್ತದೆ. ಪು.ತಿ.ನ.ರವರ `ಗೋಕುಲ ನಿರ್ಗಮನ' ಅಂತಹ ಅನುಭವ ಹೊತ್ತಿಸುವಂತಹ ಒಂದು ಉತ್ತಮ ರಚನೆ. ಓದಿದಾಗಲೆಲ್ಲ ನಮ್ಮನ್ನು ಹೊಸ-ಹೊಸ ಭಾವ ಪ್ರಪಂಚಕ್ಕೆ ಒಯ್ಯುವ ಶ್ರೇಷ್ಠತೆ ಪಡೆದ ಕೃತಿ ಅದು. ಬಿ. ವಿ. ಕಾರಂತರು ನಿರ್ದೇಶಿಸಿದ `ಗೋಕುಲ ನಿರ್ಗಮನ' ಈ ಅನುಭವಕ್ಕೊಂದು ಹೊಸ ಆಯಾಮವನ್ನು ದೊರಕಿಸಿ ಕೊಟ್ಟಿದೆ. ಹಲವು ವಿಮರ್ಶಕರು ತಮ್ಮ ವ್ಯಾಖ್ಯಾನಗಳ ಮೂಲಕ ಇಂತಹ ಅನುಭವಗಳನ್ನು ವೃದ್ಧಿಸಿದ್ದಾರೆ. ಪ್ರಸ್ತುತ, ಇಲ್ಲಿ ಪು.ತಿ.ನ. ಅವರ `ಗೋಕುಲ ನಿರ್ಗಮನ'ದ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ವ್ಯಕ್ತಪಡಿಸುವುದು ಈ ಲೇಖನದ ಮುಖ್ಯ ಉದ್ದೇಶ.

`ಗೋಕುಲ ನಿರ್ಗಮನ' ಗೇಯ ನಾಟಕದಲ್ಲಿ ಮುರಳಿಯದೇ ಮುಖ್ಯ ಪಾತ್ರ:

ಕಾಡುಗೊಲ್ಲನೊಬ್ಬನ ಕೊಳಲದನಿಯೊಡನೆ ಈ ಗೀತರೂಪಕವು ಪ್ರಾರಂಭವಾಗಿ, ಅದರೊಡನೆ ಗೋಕುಲದ ಸಂತಸ ತುಂಬಿದ ಬದುಕು ನಮ್ಮ ಮುಂದೆ ಅನಾವರಣವಾಗುತ್ತದೆ. ಗೋಕುಲದ ಪ್ರಜೆಗಳ ಮೇಲೆ ಕೃಷ್ಣ ಮತ್ತು ಅವನ ಕೊಳಲಿನ ಪ್ರಭಾವ ಅದ್ಭುತವಾದುದು. ಆದರೆ, ಆ ಕೊಳಲಿನ ಸವಿ ಉಡುಗಿಹೋಗುವ ಸಂದರ್ಭ ನಾಟಕದದಲ್ಲಿ ಒದಗಿಬರುತ್ತದೆ. `ವೇಣು ವಿಸರ್ಜನೆ' ಮತ್ತು ಕೃಷ್ಣನ `ಗೋಕುಲ ನಿರ್ಗಮನ'ದೊಂದಿಗೆ ನಾಟಕದ ಮುಖ್ಯಕಥೆ ಮುಕ್ತಾಯವಾಗುತ್ತದೆ. ನಾಟಕದ ಕೊನೆಯಲ್ಲಿ ಮೊದಲು ಕೇಳಿದಂಥ ಕೊಳಲ ದನಿಯೇ ಕೇಳಿಬರುತ್ತದೆ. ಹೀಗೆ, ಕೊಳಲು ದನಿಯೆರಡರ ಮಧ್ಯೆ ಬಿಚ್ಚಿ ಹರಡುವ ಈ ಕಥೆ, ಕೊಳಲು ಗಾನದ ರಮ್ಯ-ದಿವ್ಯತೆಗಳನ್ನು ನಿರೂಪಿಸುವ ಒಂದು ಭವ್ಯ ಕೃತಿ.

ಕೃಷ್ಣ, ರಾಧೆ, ಗೋಪ-ಗೋಪಿಕೆಯರು, ಅವರ ಸಂತಸ-ಸಂಭ್ರಮ, ಅವರ ಉತ್ಸಾಹ, ಮಾಧವನ ಮುಗ್ಧ ಮುರಳಿಯ ನಾದತರಂಗ, ಯಮುನೆಯ ಅಲೆಗಳು - ಎಲ್ಲ ಗೋಕುಲ ಜನರ ಜೀವನದ ಅಂಶವೇ! ರಾಧೆಯ ನಿಶ್ಚಲ ಪ್ರೇಮ, ಕೃಷ್ಣನ ಕೊಳಲ ದನಿಯ ಸ್ತಬ್ಧತೆಯ ಜೊತೆಗೆ ಉಡಗಿ ಹೋದರೂ, ರಾಧೆ-ಶ್ಯಾಮರ ಪ್ರೇಮ ಮಾತ್ರ ನಮ್ಮ ಮನಸ್ಸಿನಿಂದ ಅಳಿಸಿ ಹೋಗಲಾರದು - ಎಂಬುದು `ಗೋಕುಲ ನಿರ್ಗಮನ'ದಿಂದ ವ್ಯಕ್ತವಾಗುತ್ತದೆ.

ಕೃಷ್ಣನ ಕೊಳಲ ದನಿ ಗೋಕುಲದ ಪ್ರಜೆಗಳ ಮೇಲೆ ಅಪ್ರತಿಮ ಪ್ರಭಾವ ಬೀರಿದೆ, ಗೋಕುಲದಲ್ಲಿ ಆ ಕೊಳಲು ಮೋಹಜಾಲವನ್ನೇ ಬೀಸಿದೆ.


			`ಎನ್ನೀ ಕೊಳಲಿದು ಕಾಡಿನ ಬಿದಿರು
			ಆ ಹುಲು ಕಡ್ಡಿಗೆ ಎನಿತೋ ಚದುರು!'

ಇದು ಕೃಷ್ಣ ಹೇಳುವ ಮಾತು, ಪು.ತಿ.ನ. ಅವರ `ಗೋಕುಲ ನಿರ್ಗಮನ'ದಲ್ಲಿ. ಈ ಮಾತು ಅದೆಷ್ಟು ದಿಟವಾದುದು! ಬೃಂದಾವನದಲ್ಲಿ ಮೊಳಗುತ್ತಿದ್ದ ಬಿದಿರು ಕೊಳವೆಯೊಂದರಲ್ಲಿ `ಎನಿತೋ ಚದುರು' ಅಡಗಿದೆ. ಅದು `.... ನಾದಮಯ, ಈ ಬೃಂದಾವನ ಆನಂದಮಯ' ವೂ ಹೌದು. ತಮ್ಮ ಗೀತ ರೂಪಕದಲ್ಲಿ ಬೃಂದಾವನದ ಆನಂದವನ್ನೇ ನಮ್ಮ ಕಣ್ಮುಂದೆ ರೂಪಿಸಿದ್ದಾರೆ ಪು.ತಿ.ನ. ಅವರು. ಒಮ್ಮೆ ಎಲ್ಲೋ ಕುಳಿತಾಗ ಒಬ್ಬ ಕಾಡುಗೊಲ್ಲನ ಕೊಳಲು ಗಾನ ಅವರನ್ನು ಗೋಕುಲದೆಡೆಗೆ ಒಯ್ದಿತ್ತಂತೆ. ಅವರೇ ಹೇಳಿದ್ದಾರೆ, `ಗೋಕುಲ ನಿರ್ಗಮನ' ಕ್ಕೆಂದು ಬರೆದ ಮುನ್ನುಡಿಯಲ್ಲಿ: - `ಈಗ ನೆನೆದುಕೊಂಡರೆ ಆ ಕೊಳಲಿನಲ್ಲಿ ಅಷ್ಟು ಇಂಪಿರಲಿಲ್ಲ. ....... ಆದರೆ ಅಂದಿನ ಕಣಸನ್ನು ಮಿಕ್ಕವು ತರಲಿಲ್ಲ' - ಎಂದು. ಹೌದು! ಅದರ ಮೇಲೆ ಉಸಿರಾಡಿಸಿದಾಗ ಉತ್ಪತ್ತಿಯಾಗುವ `ಸರಿಗಮಪದನೀ' ಸ್ವರಸಂಗಮ, ಲೋಕವನ್ನೇ ಮಂತ್ರ-ಮುಗ್ಧತೆಯಲ್ಲಿ ಮುಳುಗಿಸುವ ಮಹಾ ಶಕ್ತಿ ಪಡೆದಿರುತ್ತದೆ. ಕೊಳಲು ಬರಿಯ ಬಿದಿರಿನ ಕೊಳವೆಯಲ್ಲ; ಅಂದು ಪು.ತಿ.ನ. ಅವರು ಕಂಡಂತಹ `ಕಣಸು'ಗಳನ್ನು ನಮ್ಮ ಮುಂದೆ ಬಿಚ್ಚಿ ಹರಡುವಂಥ ಚಮತ್ಕಾರವುಳ್ಳ ಒಂದು ಸಾಧನ! ಆ ಕೊಳಲಿನ ದನಿ ಪು.ತಿ.ನ. ಅವರನ್ನೂ, ಜೊತೆಯಲ್ಲಿ ನಮ್ಮನ್ನೂ ಸಂತಸ-ಸಂಭ್ರಮಗಳಿಂದ ನಲಿಯುತ್ತಿದ್ದ ನಂದನವನ, ಬೃಂದಾವನಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ನಡೆಯುವ ರಾಧಾ-ಕೃಷ್ಣರ ರಾಸ ಕ್ರೀಡೆಯಲ್ಲಿ ನಮ್ಮನ್ನು ಭಾಗಿಗಳಾಗುವಂತೆ ಮಾಡುತ್ತದೆ.

`ಗೋಕುಲ ನಿರ್ಗಮನ' ಗೀತ ರೂಪಕ, ಗೋಕುಲದಲ್ಲಿ ಗೋಪ-ಗೋಪಿಯರ ಬದುಕನ್ನು ಪ್ರಸ್ತುತ ಪಡಿಸುವ ಒಂದು ಸುಂದರ ರಚನೆ. ಹುಣ್ಣಿಮೆಯ ಒಂದು ರಾತ್ರಿಯ ಕೆಲವೇ ಗಂಟೆಗಳಲ್ಲಿ ಸಂಭವಿಸಿದ ಒಂದು ಮಹತ್ವ ಘಟನೆಯ ವಿವರ `ಗೋಕುಲ ನಿರ್ಗಮನ'ದ ಕಥಾವಸ್ತು. ಅಂದು ಗೋಪಾಲಕೃಷ್ಣ ಮಧುಸೂದನನಾಗುವ ಸಂದರ್ಭ! ಹಸುಗಳನ್ನು ಕಾಯುತ್ತಿದ್ದ ಗೊಲ್ಲ ಹುಡುಗ ಕೇಶವನಾಗುವ ಸಂದರ್ಭ! ಕಾಡಿನ ಬಿದಿರು ಕೊಳವೆಯನ್ನು ಹಿಡಿದ ಕೈ ಪಾಂಚಜನ್ಯ ಹಿಡಿಯಲು ತಯಾರಿ ನಡೆಯುತ್ತಿರುವ ಸಂದರ್ಭ! (ಸುಜನಾ ಅವರ ಮಾತಿನಂತೆ: `ಮುರಲೀಧರ ಮನಮೋಹಕ ಗೋಪಾಲಬಾಲ ರಾಧಾಕೃಷ್ಣ ಶಂಖಧರ ಮಧುಸೂದನ ಕೃಷ್ಣನಾಗುವ' ಸಂದರ್ಭ!) ಮುರಲಿಯನ್ನು ಬಿಸುಟು ಮಧುರೆಗೆ ಹೊರಡುವವನಿದ್ದಾನೆ ಅಂದು, ಕೃಷ್ಣ. ಗೋಪಿಯರೊಡನೆ ಅನುಭವಿಸಿದ ಸಂತೋಷದ ಕಾಲ ಆ ರಾತ್ರಿ ಕೊನೆಗೊಂಡು, ಅವನ ಬಾಳಿನ ಇನ್ನೊಂದು ಹಂತ - ಕರ್ತವ್ಯಮುಖಿಯಾದ ಹಂತ - ಅನಾವರಣವಾಗುತ್ತದೆ, ಮಹಾಭಾರತದ ಮಹಾನ್‍ಘಟನೆಗಳಿಗೆ ಮುಹೂರ್ತವಾಗುತ್ತದೆ!

- ಆಹಿತಾನಲ, ಆರ್ಕೇಡಿಯ, ಕ್ಯಾಲಿಫೋರ್ನಿಯ, ಯು.ಎಸ್.ಎ