ಸೌಂದರ್ಯೋಪಾಸನೆಯೇ ದೇವರ ಪೂಜೆ - ಅಂತಿಮ ಭಾಗ

ಬೇಲೂರು ಗುಡಿಯ ಸುತ್ತ ಮೆರೆಯುತ್ತಿರುವ ಅಂಗನೆಯರ ಅಂಗಾಂಗ ಸೌಂದರ್ಯವನ್ನು ಪ್ರದರ್ಶಿಸಲು, ಕೋತಿ, ಚೇಳು, ಗಿಳಿ, ಮೊದಲಾದ ಪ್ರಾಣಿಗಳೂ ಕಾರಣರಾಗುತ್ತಾರೆ. `ಕಪಿ ಕುಪಿತೆ' ಎಂಬ ಗೀತೆಯಲ್ಲಿ, ಕಪಿಯೊಂದು ತನ್ನ ಸೀರೆಯನ್ನು ಎಳೆಯಿತೆಂದು ಕೋಪ ಮಾಡಿಕೊಳ್ಳುತ್ತಾಳೆ ಒಬ್ಬ ಲಾವಣ್ಯವತಿ:

ಓ ಮುಗ್ಧಕೋಪನೇ - ಪ್ರೇಮಸ್ಮಿತಾನನೇ |
ಕೈಮಾಳ್ಪುದೇಕೆ ನೀ - ನೀ ಮಂಗಮಾಣಿಯೊಳ್ ||
ಮಾನಂಬರಾಂತವ - ವಾನರನೆಳೆದೊಡೇಂ |
ಹಾನಿಯದೇನಾಯ್ತೆ - ಮಾನಾಭಿಮಾನಿನಿ ||
ಏಣಾಕ್ಷಿ ನಿನ್ನಯ - ಪೀನಾಂಗವಿಭ್ರಮ - ||
ಧೂನನಕೀ ಕಪಿ - ಕಾರಣನಾದನೇ ||

ಆದರೆ, ಆಕೆಯದು ಮುಗ್ಧ ಕೋಪ; ಮುಖದಲ್ಲಿ, ಅನುರಾಗಾದ ನಗು ಸೂಸುತ್ತಿದೆ. ಆದರೂ, ತನ್ನ ಅಂಗಾಂಗ ಚೆಲುವು, ಬಳುಕುವ ಮೆಯ್ಯ ಅಂದವೆಲ್ಲವೂ ಎಲ್ಲರಿಗೂ ತೋರುವಂತೆ ಪ್ರಕಟವಾಯ್ತಲ್ಲಾ ಎಂದು ಹುಸಿ ಕೋಪವಿದೆ, ಅವಳಿಗೆ. ತನ್ನ ಅಪ್ರತಿಮ ಸೌಂದರ್ಯದ ಅರಿವು ಅವಳಿಗಿದೆ; ಕೇಶವನಿಗೇ ಅದನ್ನು ಮೀಸಲಿಟ್ಟಿದ್ದಾಳೆ. ಬೇರೆ ಯಾರಾದರೂ ತನ್ನ ನಗ್ನತೆಯನ್ನು ನೋಡಿದರೇ ಎಂಬ ನಾಚಿಕೆ ಕೂಡಿದ ಭಯದಿಂದ, ಜಿಂಕೆ, ಚಂಚಲ ಕಣ್ಣಿಂದ ಆಚೀಚೆ ಚುರುಕು ನೋಟ ಬೀರುವಂತೆ, ದೃಷ್ಟಿ ಚಲಿಸುತ್ತಾಳೆ. ಆದರೆ, ಆ ಕಪಿ ಮಾಡಿದ ಅಪರಾಧವಾದರೂ ಏನು? ಅದು ಅವಳ ಸೌಂದರ್ಯ ಪ್ರದರ್ಶನಕ್ಕೆ ಕಾರಣವಾಯ್ತು. ಅಷ್ಟೆ!

ಇನ್ನೊಬ್ಬ ಶಿಲಾಬಾಲಿಕೆ ಕಪಿಚೇಷ್ಟೆಯಿಂದ ಕೋಪಗೊಂಡು ಅದನ್ನು ಓಡಿಸಲು ಕೋಲೆತ್ತುತ್ತಾಳೆ. ಆದರೆ, ಈಕೆ ಪಂಜರದೊಳಗಿನ ಗಿಳಿಯಂತೆ, ಮನ್ಮಥನ ಕಾಮಸೆರೆಯಾಳಾಗಿದ್ದಾಳೆ.

ಉಡಿಗೆಯನೆಳೆಯೆ ನಿ - ನ್ನೊಡಲಿನೊಯ್ಯಾರದ |
ಬೆಡಗು ಕಣ್ಗಳಿಗೆ ನೂ - ರ್‍ಮಡಿ ಸೊಗಸಾಯ್ತೇ ||
ಬಿಡು ರೋಷ ದೃಷ್ಟಿಯ - ಬಿಸುಡಾ ದ್ರುಯಷ್ಟಿಯ |
ಹುಡುಗಾಟದೀ ಹುಚ್ಚು - ಕೇಶವನಿಗೆ ಮೆಚ್ಚು ||

ಈ ಕಪಿಚೇಷ್ಟೆಯು ಹುಡುಗಾಟದ ಹುಚ್ಚೆಂದು ಕಂಡುಬಂದರೂ, ಅದು ಕೇಶವಗೆ ಬಲು ಮೆಚ್ಚು. ಕಪಿಯಲ್ಲದೆ, ಚೇಳೂ ಈ ಮದನಿಕೆಯರಿಗೆ ಸವಿ-ಸಮಸ್ಯೆಗಳನ್ನು ಒಡ್ಡುತ್ತದೆ. ಇಲ್ಲಿ `ನೀಲಾಂಬರೆ'ಯ ಸೀರೆಯಲ್ಲಿ ಚೇಳೊಂದು ಸಿಲುಕಿ, ಅದನ್ನು ಕೊಡವಿಬಿಡಲು ಮಾಡುವ ಪ್ರಯತ್ನಗಳೆಲ್ಲ, ಅವಳ ಅಂಗಾಂಗ ಸೊಬಗನ್ನು ಪ್ರದರ್ಶಿಸಲು ಕಾರಣವಾಗುತ್ತದೆ:

ಬೆಚ್ಚಿಸಿ ನಿನ್ನನು - ನಿಶ್ಚಲಗೈದು ತ - ||
ನ್ನಕ್ಷಿಗೆ ಸಿಂಗಾರದೂಟವನುಣಿಸೆ ||

ಪಾಪ! ಚೇಳಿನ ಕಡಿತದಿಂದ ತಪ್ಪಿಸಿಕೊಳ್ಳಲು, ತನ್ನ ನಗ್ನತೆಯನ್ನು ಪ್ರದರ್ಶಿಸಬೇಕಾಗುತ್ತದೆ, ಇವಳಿಗೆ. ಆದರೆ, ಅದು ನೋಡುವವರ ಕಣ್ಣಿಗೆ ರಸದೂಟವನ್ನೇ ನೀಡುತ್ತದೆ.

ಕೇಶವನ ಪ್ರೀತಿ ಸಂಪಾದಿಸುವ ಪ್ರಯತ್ನ ಮಾಡುತ್ತ, ಗಿಳಿಗಳನ್ನು ದೂತರಾಗಿ ಉಪಯೋಗಿಸಿ, ಅವನಿಗೆ ಅದೇನೋ ಪ್ರೇಮ-ಸಂದೇಶ ಕಳುಹಿಸುತ್ತಾರೆ, ಈ ಲಲನೆಯರು:

ಏನೇ ಶುಕ ಭಾಷಿಣೀ - ಇದು |
ಏನೇ ಶುಕ ಭಾಷಿಣೀ - ಸುದ್ದಿ- |
ಯೇನೇ ಮನೋಲ್ಲಾಸಿನೀ ||
* * * * * * *
ವನ್ಯಪ್ರವಾಸಿಯೊಳೇಂ - ನಿನ್ನ |
ಬಿನ್ನಾಣ ಬೂತಾಟಗಳ್ ||
ಇನ್ನಾರುಮಿಲ್ಲವೆ ಚೆನ್ನ ಕೇಶವನಿಗೆ |
ನಿನ್ನಂದ ಚಂದವ ಬಣ್ಣಿಪ್ಪ ಚತುರರು ||

ಈ ಚತುರೆಯೊಡನೆ ಮಾತನಾಡುತ್ತಿರುವ ಗಿಳಿಯು ಕೇಶವನಿಗೆ ಇವಳ ಸೌಂದರ್ಯ ವರ್ಣನೆ ಮಾಡುವ ದೂತಿಯೇ ಇರಬೇಕು. ಅಂತೆಯೇ, ಈ `ಶುಕಸಖಿ'ಗೆ ಮಾತು ಕಲಿಸಿ, ತನ್ನ ಅನುರಾಗವನ್ನು ಕೇಶವನಿಗೆ ತಿಳಿಸಲು ಪ್ರಯತ್ನಪಡುತ್ತಿದ್ದಾಳೆಯೇ?:

ಕಲಿಸಿದುಲಿಯನುಲಿಯುವ ಗಿಣಿ |
ತಿಳಿಯಲಹುದೇ ನಿನ್ನ ಮನವ ||

ಆದರೂ, ಆ `ಅರಗಿಣಿ'ಯ ಆಡುವ ಮಾತು ಅವಳನ್ನು ಮರುಳುಗೊಳಿಸುತ್ತದೆ. ಇನ್ನೊಬ್ಬಳು ಗಿಳಿಯ ಮಾತನ್ನು ಕೇಳುತ್ತ, ಅದರಲ್ಲೇನೋ ಸ್ವಾರಸ್ಯವನ್ನು ಅನುಭವಿಸುತ್ತಾಳೆ:

ಕೀರೋಕ್ತಿಯೊಳಾವುದನೋ |
ಸ್ವಾರಸ್ಯವ ಕಾಣುತಲೀ ||
ಚಾರುಪ್ರಭೆ ವಲ್ಲಭನಂ |
ಸಾರಿರ್‍ಪಳ್ ಮಾನಸದೊಳ್ ||

ಒಸಗೆಗಾಗಿ ಹಾತೊರೆಯುತ್ತಿರುವ ಈ ಯುವತಿಗೆ ಆ ಗಿಳಿಯು ಮನ್ಮಥನ ಒಸಗೆಯನ್ನು ತಂದಿರಬಹುದೇ?

ಹೀಗೆ ೬೦ ಕವನಗಳ ಈ ಸಂಕಲನದುದ್ದಕ್ಕೂ ಶಿಲಾ ಬಾಲಿಕೆಯರ ಅಂಗಾಂಗ ಸೌಂದರ್ಯ ದರ್ಶನ ನಡೆದಿದ್ದು ಓದುಗರ ಮನಸೆಳೆದು, ಅರಳಿಸುತ್ತದೆ. ಇವರು, ನರ್ತನ ಮಾಡುತ್ತಾರೆ; ವೇಣು, ವೀಣೆಗಳನ್ನು ನುಡಿಸುತ್ತಾರೆ; ಅಂಗಾಂಗ ಚೇಷ್ಟೆಗಳಿಂದ ಚೆಲುವನ್ನು ಪ್ರದರ್ಶಿಸುತ್ತಾರೆ; ಇವೆಲ್ಲ ಮಾಟದಾಟಗಳಿಂದ ಕೇಶವನ ಹೃದಯಪ್ರವೇಶ ಮಾಡುತ್ತಾರೆ. ಈ ಕೆಳಗೆ ಕಾಣಿಸಿದ ಶಿಲಾ ಬಾಲಿಕೆಯರ ವರ್ಣನೆಯು, ಬಹುಶಃ, ಸಂಕಲನದಲ್ಲಿ ಬರುವ ಎಲ್ಲ ವರ್ಣನೆಯ ಸಾರಾಂಶವೆಂದು ಹೇಳಬಹುದೇನೊ!:

ಬೇಲೂರ ಶಿಲಾಬಾಲಾಮಣಿಯರ್
ಶ್ರೀಲಾಕೃತಿ ಲಾವಣ್ಯೋಜ್ಜ್ವಲೆಯರ್
ಲೋಲಾವಯವೋದಾರೇಂಗನೆಯರ್
ಕಾಲಾಪಗೆಯಾ ಕೂಲಂಬೋಲಿಹರ್

ಈ ಬಾಲಿಕೆಯರು ಓದುಗರ ಸ್ಮೃತಿ ಪಟಲದಲ್ಲಿ ಸದಾ ಹಾಡಿ ಕುಣಿದು ನಾಟ್ಯವಾಡುತ್ತಿರುವರು.

ಗೆಜ್ಜೆ ಕಿಂಕಿಣಿಗಳ ನಿಸ್ವಾನ ಸ್ವನ ಮಿಗೆ
ಮದ್ದಲೆ ತಾಳದ ತದ್ದಿಮಿ ಧೀಮಿಗೆ
ಹೃದ್ಯಾಂಗಭಂಗಿಗಳಾ ಪ್ರತಿಸಂಜ್ಞೆಗೆ
ಮಾದ್ಯನಾಗನೆ ನಮ್ಮ ಮುದ್ದು ಕೇಶವ ದೊರೆ

ಕೇಶವನಲ್ಲದೇ ನಮ್ಮನ್ನೂ ಪುಳಕಿಸುವ ಅಪ್ಸರೆಯರಿವರು. ಇಂತಹ ಕನ್ಯೆಯರ ಸೌಂದರ್ಯವನ್ನು, ಭಂಗಿಯನ್ನು, ನಾಟ್ಯವನ್ನು, ಅಂಗಚೇಷ್ಟೆಯನ್ನು, ಗಾನವನ್ನು, ಮೆಚ್ಚದಿರುವ `ಯಾತ್ರಿಕ'ರ್‍ಯಾರಾದರೂ ಇದ್ದಾರೆಯೇ? ಈ ಶಿಲಾಬಾಲಿಕೆಯರನ್ನು ವರ್ಣಿಸುವುದಕ್ಕೆಂದೇ `ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು' ಎಂದು ಕುವೆಂಪುರವರು ಹಾಡಿ ಹೊಗಳಿದ್ದಿರಬೇಕು.

ಭೋಗಭಂಗಿಯೊಳಾತ್ಮ-ತ್ಯಾಗವ ಗೈದಿಹ |
ರಾಗಿಣಿಯರ ಜೀವ-ಯಾಗ ಮಂಟಪವಿದು ||

ಅಪ್ರತಿಮ ಪ್ರತಿಭಾವಂತ ಶಿಲ್ಪಿಗಳು ನಿರ್ಮಿಸಿದ ರಾಗಿಣಿಯರ ಕಲಾಮಂಟಪವೇ ಬೇಲೂರ ಗುಡಿ. ಅವರು ಕೆತ್ತಿ ಹೆಣೆದ `ಕಲೆಯ ಬಲೆ'ಯು ಗುಡಿಯ ಸುತ್ತೆಲ್ಲ ಹಬ್ಬಿದೆ. ಕವಿಯು ಲೇಖನಿಯಿಂದ ಕೆತ್ತಿ ನಿರ್ಮಿಸಿದ ರಾಗ-ಮಂಟಪವೇ `ಅಂತಃಪುರಗೀತೆ'ಗಳಲ್ಲಿನ ಈ ಕಾವ್ಯಕೃತಿಗಳು! ಅದು ಕಲೆಯ ಗುಡಿಯೂ ಹೌದು; ಕಾವ್ಯ-ದೇಗುಲವೂ ಹೌದು; ಸೌಂದರ್ಯೋಪಾಸನೆಯ ನೆಲೆಯೂ ಹೌದು! ಶಿಲ್ಪಿಗಳು ತಮ್ಮ ಕುಶಲ ಕಲಾಶಕ್ತಿಯಿಂದ ಜಡವೆಂದೆಸಿಕೊಂಡ ಕಲ್ಲಿಗೆ ಜೀವಕಳೆ ತುಂಬಿಸಿದ್ದಾರೆ, ಶಿಲಾಬಾಲಕಿಯರ ರೂಪದಲ್ಲಿ. ಕವಿ ತನ್ನ ಕಾವ್ಯಶಕ್ತಿಯೆಂಬ ಕಲೆಯ ಮೂಲಕ ಆ ಶಿಲಾಬಾಲಿಕೆಯರನ್ನು ನಮ್ಮ ಮುಂದೆ ಜೀವಂತವಾಗಿ ಕುಣಿಸಿದ್ದಾರೆ, ನಮ್ಮ ಮನ ತಣಿಸಿದ್ದಾರೆ, `ಅಂತಃಪುರಗೀತೆ'ಯಲ್ಲಿ.

ಕಲೆಯಿಂದ ಶಿಲೆಯಮೃತ
ಲಲಿತಕಲೆ ಹೃತ್ ಸುಕೃತ
ಬೇಲೂರ ನೋಡು
ಆಳಿವ ಲೋಕದ ನಡುವೆ
ಉಳಿವ ರಸಘಟಕೆ
ಬಾಳ್ಜೇನ ನೋಡು

ಹೌದು! ಬೇಲೂರ ಗುಡಿ ಕಲೆಯ ಬಲೆಯ `ಶಿಲೆಯಮೃತ.' ಈ ಅಮೃತದ ಸವಿಯನ್ನು ಅನುಭವಿಸಲು ನಿಜಕ್ಕೂ ಬೇಲೂರ ಗುಡಿಯನ್ನು ಸಂದರ್ಶಿಸಲೇ ಬೇಕು. ಆದರೆ, ಡಿವಿಜಿಯವರು ಆ ಅಮೃತವು ಧಾರೆಯಾಗಿ ಹರಿದು ಬರುವಂತೆ ಮಾಡಿದ್ದಾರೆ ತಮ್ಮ `ಅಂತಃಪುರ ಗೀತೆ'ಯ ಕವನಗಗಳ ಮೂಲಕ. ಅದೊಂದು ರಸಿಕನಿಗೆ ರಸದೌತಣ ನೀಡುವ ಕಾವ್ಯಾಮೃತ, `ಹೃತ್ ಸುಕೃತ'! ಅದಕ್ಕಾಗಿ ಸಾರಸ್ವತಲೋಕವು ಡಿವಿಜಿಯವರಿಗೆ ಸದಾ ಕೃತಜ್ಞರು!