ಅಮ್ಮನ ನೆನಪಿನ ಕೆಲವು ಅಮೃತ ಘಳಿಗೆಗಳು

"ಮದರ್ಸ್ ಡೇ" ಅಂಗವಾಗಿ ಆರ್ಕೇಡಿಯಾನಲ್ಲಿ ವಾಸವಾಗಿರುವ ಶ್ರೀ ಆಹಿತಾನಲ ಅವರ ಲೇಖನವನ್ನು ಅರ್ಪಿಸುತ್ತಿದ್ದೇವೆ.

`ಅಮ್ಮ' ಎಂಬ ಕರೆ ಪ್ರೀತಿಯ ಪ್ರತೀಕ. ಅದು ಬರಿಯ ಎರಡು ಅಕ್ಷರಗಳ ಜೋಡಣೆ ಮಾತ್ರವಾಲ್ಲ; ಅದು ಒಂದು ಅಪೂರ್ವ ಅನುಭವ ನೀಡುವ `ಮಾಂತ್ರಿಕ' ಕರೆ! ಈ ಶಬ್ದದಲ್ಲಡಗಿರುವ ಅಪಾರ ಪ್ರೀತಿಯ ಪ್ರವಾಹದಿಂದ ಹರಿದು ಬಂದ ಆನಂದದ ಮುಂದೆ ಬೇರೆಲ್ಲವೂ ಕಿರಿದಾಗಿಯೇ ಕಾಣಿಸುವುದು. ಅಕ್ಷರ ಮಾಲೆಯ ಮೊದಲನೆಯ ಅಕ್ಷರವೇ `ಅ'. ಮಗುವು ಕಲಿಯುವ ಮೊದಲ ಮಾತೇ `ಅಮ್ಮ' ಎಂದು `ಅ'ಕಾರದಿಂದಲೇ ಪ್ರಾರಂಭವಾಗುವುದು. ಹೀಗೆ ಅದೇನೋ ಚಮತ್ಕಾರ `ಅ'ಕಾರದಲ್ಲಿ ಅಡಗಿದಂತಿದೆ! `ಅಮ್ಮ' ಎಂದು ಕರೆಯುವಾಗ ಮಗುವಿಗೆ ವ್ಯಾಕರಣ ಮತ್ತು ಅಕ್ಷರ ಮಾಲೆಯ ಗಂಧವಿರುವುದಿಲ್ಲ; ಶಬ್ದ ಜೋಡಣೆಯ ಅಂದವೂ ತಿಳಿದಿರುವುದಿಲ್ಲ. ಆದರೂ ಅದಾವುದೋ ಒಂದು ಅವ್ಯಕ್ತ ಅಂತರಂಗ ಪ್ರೇರಣೆಯೇ ಮಗುವನ್ನು ಹಾಗೆ ಕರೆಯವಂತೆ ಮಾಡುತ್ತದೆ. `ಅಮ್ಮ' ಎಂಬ ಶಬ್ದದಿಂದ ಮೂಡಿ ಬಂದ ಮಮತೆಯೇ ಈ ಪ್ರೇರಣೆಗೆ ಕಾರಣ. `ಅ'ಕಾರವು ಕಂಠದಿಂದ ಉದ್ಭವಿಸುವ ಚೈತನ್ಯದ ಸಂಕೇತವಾಗಿದೆ. ಮುಂದೆ ಮ-ಮ ಕೂಡಿದ ಒತ್ತಕ್ಷರ `ಮ್ಮ' ಸೇರಿ ಮಮ-ತೆಯನ್ನೇ ಸೂಸುತ್ತ `ಅ' ಸ್ವರದಿಂದಲೇ `ಅಮ್ಮ' ಎಂದು ಕೊನೆಗೊಳ್ಳುತ್ತದೆ. ಅಂತರಾಳದಿಂದ ಹುಟ್ಟಿ ಬಂದ ಮಗುವಿನ ಪ್ರೀತಿಯು `ಅಮ್ಮ' ಎಂಬ ಅಕ್ಕರೆಯ ಕರೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. `ಅಮ್ಮ' ಎಂಬ ಶಬ್ದದಲ್ಲಿ ತುಂಬಿ ತುಳುಕುತ್ತಿರುವ ಪ್ರೀತಿಯ ನೆಲೆಯನ್ನು ಅಳೆಯುವ ಸಾಮರ್ಥ್ಯವನ್ನು ಯಾವ ಗ್ರಂಥವೂ ಪಡೆದಿಲ್ಲವೋ ಏನೋ! ಅದು ನೀಡುವ ಅನುಭವವೇ, ಅನಂತವಾದ ಅಮೃತ ಕಡಲಲ್ಲಿ ತೇಲಾಡುವ ಅತ್ಯಾನಂದ!
ಒಂಭತ್ತು ತಿಂಗಳು ಹೊತ್ತು ನಮಗೊಂದು `ಜೀವ' ಕೊಟ್ಟು ನಮ್ಮ ಜೀವನಕ್ಕೊಂದು ರೂಪು ಕೊಡಲು ತಾಯಿಯು ಪಡುವ ಶ್ರಮಕ್ಕೆ ನಾವೆಲ್ಲರೂ ಕೃತಜ್ಞರಾಗಿರಲೇಬೇಕು. ತನ್ನ ಕೈಲಾಗುವಷ್ಟು ಸಮಯ ಮಗುವಿನ ಬಗ್ಗೆ ಆಕೆ ಪಡುವ ಶ್ರಮಕ್ಕೆ ಪ್ರತಿಯಾಗಿ ಸರಿಯೊಪ್ಪುವ ಋಣ ತೀರಿಸುವುದು ಕಷ್ಟವೇ! ನಾನಂತೂ ಯಾವ ವಿಧದಲ್ಲೂ ಅಂಥ ಋಣ ತೀರಿಸುವ ಪ್ರಯತ್ನವನ್ನೇ ಮಾಡಲಿಲ್ಲ. ದೂರದಲ್ಲಿದ್ದು `ಅಮ್ಮಾ, ನನಗೆ ನಿನ್ನಲ್ಲಿ ಅಪಾರ ಪ್ರೇಮ' ಎಂದು ಮಾತ್ರವೇ ಹೇಳಿ, ನನ್ನ ಕೃತಜ್ಞತೆಯನ್ನು ಸಲ್ಲಿಸಿದೆನೆಂಬ ಸಮಾಧಾನ ಪಡೆಯಲು ಯತ್ನಿಸಿದೆ. ಆ ದೃಷ್ಟಿಯಲ್ಲಿ ನಾನೊಬ್ಬ ಕರ್ತವ್ಯ ಲೋಭಿ! ಅವಳ ಕೊನೆಯ ಗಳಿಗೆಯಲ್ಲೂ, ಅವಳು ಕೇಳಿಕೊಂಡಿದ್ದರೂ, ಕಾರಣಾಂತರದಿಂದ ಅವಳನ್ನು ನೋಡಲೂ ಹೋಗಿರಲಿಲ್ಲ. ನನ್ನನ್ನು ನೋಡಬೇಕೆಂಬ ಬಯಕೆ ತೀರಿಸಿಕೊಳ್ಳದೇ ಆಕೆ ತೀರಿಕೊಂಡಳು! ಇದು ನನ್ನಲ್ಲಿ ಒಂದು ರೀತಿಯ `ಅಪರಾದಿ ಭಾವನೆ'ಯನ್ನು ಮೂಡಿಸಿದೆ. ನಾನು ಹಿಂದೆ ಕಾಹಿಲೆ ಬಿದ್ದಾಗ ಔಷಧಿ-ಕಷಾಯ ಕೊಟ್ಟು, ಮದ್ದು-ಮಾಟಗಳನ್ನು ಮಾಡಿ, ಹೊತ್ತು ಹೊತ್ತಿಗೆ ಊಟ ಉಣಿಸಿ ನನ್ನನ್ನು ಪೋಷಿಸಿದ್ದಳು; ರಾತ್ರಿ ಗುಡುಡು-ಸಿಡಿಲು ಬಂದಾಗ ನನಗೆ ಧೈರ್ಯ ಕೊಟ್ಟು ಜತೆಯಲ್ಲಿ ಮಲಗಿ ನೆಮ್ಮದಿ ಕೊಟ್ಟಿದ್ದಳು. ಇಷ್ಟಾದರೂ, ಇವಕ್ಕೆ ಪ್ರತಿಯಾಗಿ ನಾನೇನೂ ಸೇವೆ ಅವಳಿಗೆ ಸಲ್ಲಿಸಲಿಲ್ಲ ಎಂಬ ಕೊರಗು ಮಾತ್ರ ಉಳಿದೇ ಇದೆ ನನ್ನಲ್ಲಿ ಇದುವರೆಗೂ.
ನನ್ನ ತಾಯಿಯ ಜೀವನ ಎಲ್ಲರಂತೆ `ಸರಿ-ತಪ್ಪು'ಗಳ ಮಿಶ್ರ ನಡೆವಳಿಕೆಗಳಿಂದಲೇ ನಡೆದು ಬಂದದ್ದು. ಒಂದು ಜೀವ ಅಳಿದ ಮೇಲೆ ಬಿಟ್ಟು ಹೋದ ಬಾಳಿನ ಒಳ್ಳೆಯ ನಡೆವಳಿಕೆಗಳ ಸ್ಮರಣೆಗಳೇ ಆ ಅಳಿದ ವ್ಯಕ್ತಿಗೊಂದು `ಪುನರ್ಜನ್ಮ' ಕೊಡುವುದೆಂದು ಹಲವರ ಅಭಿಪ್ರಾಯ. ನನ್ನ ತಾಯಿಯು ನಮ್ಮನ್ನಗಲಿದ ಮೇಲೆ ಬಿಟ್ಟು ಹೋದ ಅವಳ ಬಾಳಿನ ಸಾರ್ಥಕತೆಗಳ ಸವಿ ನೆನಪುಗಳನ್ನು ಮಾಡಿಕೊಳ್ಳುವುದೇ ನನ್ನ ಮುಖ್ಯ ಉದ್ದೇಶವಿಲ್ಲಿ. ಅವಳ ನಂಬಿಕೆ, ನಡೆವಳಿಕೆ, ಮತ್ತು ಮಾತೃವಾತ್ಸಲ್ಯಗಳ ನೆನಪುಗಳೆಲ್ಲ ಚಿರಂತನವಾಗಿ ಉಳಿಯುತ್ತದೆ ಎಂಬುದನ್ನು ನಾನು ನಂಬಿರುತ್ತೇನೆ. ಅವಳನ್ನು `ದೇವತೆ' ಸ್ಥಾನಕ್ಕೆ ಏರಿಸದೆ, ಅವಳ ಬಾಳಿನ ಒಳ್ಳೆಯ ನಡೆವಳಿಕೆಗಳು ನನ್ನ ಸ್ಮರಣೆಯಲ್ಲಿ ಹೇಗೆ ಉಳಿದು, ಬೆಳೆದು ನನ್ನ ಜೀವನದಲ್ಲೂ ಬೆರೆತು ಬರುವ ಪ್ರಯತ್ನ ನಡೆದಿದೆ ಎಂಬುದನ್ನು ಅರಿಯಲು ಯತ್ನಿಸುತ್ತಿದ್ದೇನೆ. ಶಂಕರಾಚಾರ್ಯರೊಮ್ಮೆ ಹೇಳಿದ್ದರು - ಕೆಟ್ಟ ಮಗು ಹುಟ್ಟಿದರೂ, ಕೆಟ್ಟ ತಾಯಿ ಇರಳಾರಳು - ಎಂದು. ಹಾಗಾಗಿ, ತಾಯಿಯು ಪ್ರೇಮದ ಚಿಲುಮೆ; ಆ ಪ್ರೇಮದಲ್ಲಿ `ಕೆಟ್ಟು'ದಕ್ಕೆ ಸ್ಥಾನವೇ ಇಲ್ಲ. ನನ್ನ ತಾಯಿಯ ಸವಿ ನೆನಪುಗಳು ಅವಳ ಬಗ್ಗೆ ನನ್ನಲ್ಲಿ ಒಂದು ವಿಶೇಷವಾದ ಹೆಮ್ಮೆಯನ್ನು ಮೂಡಿಸಿದೆ. ಅಲ್ಲದೇ, ನನ್ನಲ್ಲಿ ಮೂಡಿದ್ದ `ಅಪರಾಧಿ ಭಾವನೆ'ಯನ್ನು ಸ್ವಲ್ಪವಾದರೂ ಹೋಗಲಾಡಿಸಿಕೊಂಡು, ನೆಮ್ಮದಿ ಪಡೆಯುವ ಪ್ರಯತ್ನ ಮಾಡುತ್ತಿದ್ದೇನೆಂಬ ಭಾವನೆಗೂ ಕಾರಣವಾಗಿದೆ.
ಅಮ್ಮನನ್ನು ನೆನೆಸಿದಾಗಲೆಲ್ಲ ಹಲವಾರು ಸನ್ನಿವೇಶಗಳು ನನ್ನ ಮನಸ್ಸಿನಲ್ಲಿ ಮೂಡಿ ಬರುತ್ತವೆ. ಆಕೆ ಹಣೆಗೆ ದೊಡ್ಡ ಕುಂಕುಮವಿಟ್ಟು ಬೆಳಿಗ್ಗೆ ದೇವರಿಗೆ ದೀಪ ಹಚ್ಚುವ ನಿಲುವಂತೂ ಪದೇ ಪದೇ ನನ್ನ ಕಣ್ಣ ಮುಂದೆ ನಿಲ್ಲುವುದು. ಬೆಳಿಗ್ಗೆ ಮುಖ ಮಾರ್ಜನೆ ಮುಗಿಸಿ, ಉದಯರಾಗವನ್ನೋ, ಮತ್ತಿನ್ನೆನೋ ಸ್ತೋತ್ರಗಳನ್ನೊ ರಾಗವಾಗಿ ಹಾಡುತ್ತ, ದೀವಿಗೆ ಹಿಡಿದು ದೇವರ ಮುಂದಿನ ಕಾಲುದೀಕ್ಕೆ ದೀಪ ಹಚ್ಚುವ ಆ ಆನಂದಮಯ ಮುಖವನ್ನು ಮರೆಯಲು ಸಾಧ್ಯವೇ ಇಲ್ಲ. ಹಚ್ಚಿದ ದೀಪದ ಬೆಳಕು ಅವಳ ಮುಖದ ಕಾಂತಿಯನ್ನೂ ಹೆಚ್ಚಿಸಿ ದೇವರ ಕೋಣೆಯನ್ನು ಬೆಳಗಿಸುವುದಲ್ಲದೆ, ಇಡೀ ಮನೆಯನ್ನೂ, ಜತೆಗೆ ನಮ್ಮೆಲ್ಲರ ಮನವನ್ನೂ ಬೆಳಗಿಸುತ್ತಿತ್ತು. ಅಮ್ಮ ನಮ್ಮ ಮನೆಯ ಬೆಳಗುವ ಜ್ಯೋತಿಯಾಗಿದ್ದಳು. ಆ ಕಳೆ ತುಂಬಿದ ನಿಲುವೇ ನನಗೆ ತಿಳಿಯದಂತೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿದಿದೆ. ಅಷ್ಟು ಆಕರ್ಶಕ ಕಾಂತಿ ಕೂಡಿದ ನಿಲುವಾಗಿತ್ತು ಅದು! ಅಮ್ಮನ ಈ ಶಕ್ತಿಯ ಅರಿವಾದಾಗಲೆಲ್ಲ ನನ್ನ ಎದೆ ತುಂಬಿ ಬರುವುದು.
ಒಮ್ಮೆ ನಾನೂ ನನ್ನ ತಾಯಿಯೂ ಸೇರಿ ಯಾರದೋ ಮನೆಯ ಊಟಕ್ಕೆ ಹೋಗ ಬೇಕಾಗಿತ್ತು. ಮಟಮಟ ಮದ್ಯಾಹ್ನ; ಬೇಸಿಗೆ ಕಾಲದ ಬಿಸಿಲಿನ ತಾಪ ಬೇರೆ! ಆ ಊಟದ ಮನೆ ತಲುಪಲು ಕಾದಿದ್ದ ಹೊಯಿಗೆ ತುಂಬಿದ ಕಿರುದಾರಿಯ ಓಣಿಯೊಂದನ್ನು ದಾಟಿ ಹೋಗಬೇಕಾಗಿತ್ತು. ಆ ಓಣಿಯೋ ಸಾಕಷ್ಟು ದೂರ ಹರಡಿತ್ತು. ನಮ್ಮ ಕಾಲಿನಾಲ್ಲಿ ಚಪ್ಪಲಿಗಳೂ ಇರಲಿಲ್ಲ. ನಮ್ಮ ತಂದೆ, ಮನುಷ್ಯನು ಕೈಲಾದಷ್ಟು ಕಷ್ಟಗಳನ್ನು ಅನುಭವಿಸ ಬೇಕೆಂದು ನಂಬಿದ ಗಾಂಧಿ ವಾದದವರು. ನನ್ನ ವಯಸ್ಸು ಚಿಕ್ಕದಾಗಿದ್ದು ಓಡುವುದರಲ್ಲಿ ಸಾಕಷ್ಟು ಚುರುಕಾಗಿದ್ದೆ. ಹಾಗಾಗಿ ನಾನು ಓಡೋಡಿ ನೆರಳನ್ನು ಸೇರಿ ತಾಯಿಯ ಬರುವಿಕೆಗಾಗಿ ಕಾಯುತ್ತಿದ್ದೆ. ಪಾಪ! ಆಕೆ ನನ್ನಷ್ಟು ಚುರುಕಾಗಿ ಓಡಲಾರದೆ ಹೇಗೋ ಪ್ರಯತ್ನಪಟ್ಟು ಓಡಿ ಬಂದು ನನ್ನನ್ನು ಸೇರಿ ಕೇಳಿದ ಈ ಮಾತನ್ನು ನಾನು ಮರೆಯಲಾರೆ. `ಮಗೂ, ನಿನ್ನ ಕಾಲು ಸುಟ್ಟೇನಾದರೂ ಬೊಕ್ಕೆ ಬಂತೇ? ಸ್ವಲ ಈ ನೆರಳಲ್ಲಿ ನಿಲ್ಲು; ನಿಧಾನವಾಗಿ ಹೋದರೆ ಸರಿ'. ತನ್ನ ಕಾಲು ಸುಟ್ಟಿದ್ದರೂ ಅದನ್ನು ಎಣಿಸದೆ ಹೇಳಿದ ಮಾತುಗಳವು. ಅದು `ಅಮ್ಮ' ಎನ್ನುವ ಶಬ್ದದಿಂದ ಹರಿಯುವ ಪ್ರೇಮಪ್ರವಾಹದ ಫಲ!
ನನ್ನ ತಾಯಿಗೆ ತುಂಬ ಓದುವ ಹವ್ಯಾಸ. ಆದರೆ ಆಕೆ `ಓದು' ಮಾತ್ರ ೧ನೆ ತರಗತಿಯಲ್ಲಿ ಕೆಲವೇ ದಿನಗಳು; ಆದರೂ ಆಕೆ ಎಷ್ಟೊಂದು ವಿದ್ಯಾವಂತಳೆಂಬುದು ಈ ಪ್ರಕರಣದಲ್ಲಿ ವ್ಯಕ್ತವಾಗುವುದು. ನಮ್ಮ ತಂದೆ ಅವಳಿಗೆ ರಾಮಾಯಣ, ಮಹಾಭಾರತ ಮುಂತಾದ ಪುಸ್ತಕಗಳನ್ನು ತಂದುಕೊಟ್ಟು ಓದಲು ಒತ್ತಾಯದ ಉತ್ತೇಜನ ಕೊಡುತ್ತಿದ್ದರು. ಹಿಗೆ, ರಾಮಾಯಣ ಪುಸ್ತಕ ಒಂದರಲ್ಲಿ ಭರತನು ಶ್ರೀರಾಮನ ಪಾದುಕೆಗಳನ್ನು ಹೊತ್ತು ಅಯೋಧ್ಯೆಗೆ ಮರಳುವ ಸನ್ನಿವೇಶವನ್ನು ಚಿತ್ರಿಸಿದ ಪುಟ ಒಂದಿತ್ತು. ಭರತ ಹೋಗುವುದನ್ನೇ ಕಣ್ಮರೆಯಾಗುವವರೆಗೂ ಲಕ್ಷ್ಮಣನು ನೋಡುತ್ತ ನಿಂತಿರುವ ಚಿತ್ರವದು. ಆದರೆ, ರಾಮ-ಸೀತೆಯರು ಹಾಗೆ ನಿಲ್ಲದೆ ತಮ್ಮ ಪರ್ಣಕುಟಿಗೆ ಮರಳುತ್ತಿದ್ದರು, ಹಿಂದೆ ನೋಡದೆ. ಆಗ ನನ್ನ ಮನಸ್ಸಿನಲ್ಲಿ ಲಕ್ಷ್ಮಣ ಎಂತಹ `ಭಾವನಾಶೀಲ'ನು; ಆದರೆ, ರಾಮ-ಸೀತೆಯರು ಅದೇಕೆ ಅಷ್ಟೊಂದು `ಭಾವನಾಶೂನ್ಯ'ರಾದರು ಎಂಬ ಭಾವನೆ ಮೂಡಿ ಬಂತು. ನಾನು ಹಾಗೆ ನನ್ನ ತಾಯಿಗೆ ಹೇಳಿದಾಗ ಆಕೆ ಕೊಟ್ಟ ಉತ್ತರವು ನನ್ನನ್ನು ಈಗಲೂ ವಿಸ್ಮಯಿಸುವುದು. `ಮಗೂ, ಶ್ರೀರಾಮ-ಸೀತೆಯರು ವಯಸ್ಸಿನಲ್ಲಿ ಲಕ್ಷಮಣನಿಗಿಂತ ಹಿರಿಯರು ಮತ್ತು ತಿಳುವಳಿಕೆಯಲ್ಲೂ ಅವನಿಗಿಂತ ಉತ್ತಮರು. ಭರತ ಹೋಗುವವನಂತೂ ಹೋದ; ಹಾಗೆಂದು ಕೊನೆಯವರೆಗೂ ದುಃಖ ಪಡುತ್ತ ನಿಂತಿರುವುದೇ? ಅವರು ತಮ್ಮ ಮುಂದಿನ ಕರ್ತವ್ಯಗಳನ್ನು ಪಾಲಿಸ ಬೇಕಲ್ಲವೇ? ಆದರೆ, ಲಕ್ಷ್ಮಣನು ಅವರಷ್ಟು ಮಾನಸಿಕ ಪರಿಪಕ್ವತೆಯನ್ನು ಹೊಂದಿರಲಾರ' ಎಂದಾಗ ಅವಳ ಅಪಾರ ತಿಳುವಳಿಕೆಗಾಗಿ ಆಶ್ಚರ್ಯವನ್ನು ವ್ಯಕ್ತಪಡಿಸಿದೆ. ಆಗ ಆಕೆ ಹೀಗೆಂದಳು: - `ಮಗೂ, ನಿನ್ನ ತಂದೆಯ ಪ್ರೇರಣೆಯಿಂದಯೇ ನನ್ನಲ್ಲಿ ಓದುವ ಉತ್ಸಾಹ ಹುಟ್ಟಿಸಿತು; ಏನಾದರೂ ಅಲ್ಪ-ಸ್ವಲ್ಪ ಜ್ಞಾನ ನನಗೆ ಬಂದಿದ್ದರೆ ಅದು ಅವರ ಉತ್ತೇಜನದ ಫಲ. ನನ್ನ ಜೀವನಕ್ಕೊಂದು ರೂಪು ಕೊಟ್ಟವರೂ ಅವರೇ'. ಎಂತಹ ಸೌಜನ್ಯತೆ! ಅವಳ `ಕರ್ತವ್ಯ' ನಿಷ್ಟೆಯ ಮಾತು ಜೀವನದ ಕರ್ತವ್ಯಗಳ ಬಗ್ಗೆ ನನ್ನನ್ನು ಎಚ್ಚರಗೊಳಿಸಿದಂತಿತ್ತು. ಅವಳ ಮೇಲಿನ ಗೌರವವು ಆಗ ನನ್ನಲ್ಲಿ ಉಲ್ಬಣಿಸಿತು.
ಅಮ್ಮ ನನಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಒದಗಿಸುಕೊಡುವುದಕ್ಕಾಗಿ ಪಟ್ಟ ಶ್ರಮ ಮತ್ತು ತ್ಯಾಗವು ಇವೆರಡು ಉದಾಹರಣೆಗಳಿಂದ ವ್ಯಕ್ತವಾಗುವುದು. ಆ ಕಾಲದಲ್ಲಿ ನಮ್ಮ ಮನೆಯಲ್ಲಿ ಹಾಲು ಬೆಣ್ಣೆ ಅತಿ ವಿರಳ. ನನಗೋ ಬೆಣ್ಣೆ ಎಂದರೆ ಪಂಚಪ್ರಾಣ. ನನ್ನ ಚಿಕ್ಕತಂದೆಯವರು ಕಾಹಿಲೆಯಿಂದಾಗಿ 'ಪಥ್ಯ'ದಲ್ಲಿದ್ದರು. ಹೆಚ್ಚಿನ ಹಾಲು, ಮೊಸರು, ಬೆಣ್ಣೆಗಳನ್ನು ಅವರಿಗೆ ಒದಗಿಸಬೇಕಾಗಿತ್ತು. ಹೀಗಿರುತ್ತ, ದೋಸೆ ಮಾಡಿದಾಗಲೆಲ್ಲ ನಾನು ಅದನ್ನು ತಿನ್ನಲು ಬೆಣ್ಣೆ-ಬೆಲ್ಲಕ್ಕಾಗಿ ತುಂಬ ಹಾತೊರೆಯುತ್ತಿದ್ದೆ. ಬೆಣ್ಣೆ-ಬೆಲ್ಲ ಮಿಶ್ರಿತ ರುಚಿಯು ನನಗೆ ಬಲು ಪ್ರಿಯ. ದೋಸೆ ತಿನ್ನಲು ಎಲ್ಲರಿಗೂ ಬಹಳ ಮಿತ ಪ್ರಮಾಣದಲ್ಲಿ, ಅಂದರೆ ಒಂದು ಚಿಕ್ಕ ಗೋಲಿಯಾಗುವಷ್ಟು ಬೆಣ್ಣೆ ದೊರೆಯುತ್ತಿತ್ತು. ನನಗೆ ಬೆಣ್ಣೆ-ಬೆಲ್ಲ ತುಂಬ ಇಷ್ಟವೆಂಬುದು ಅಮ್ಮನಿಗೆ ತಿಳಿದೇ ಇತ್ತು. ಅದಕ್ಕೇ ಆಕೆ ಎಷ್ಟೋ ಬಾರಿ ತನ್ನ ಪಾಲಿನ ಬೆಣ್ಣೆಯನ್ನು ನನಗೆ ಕೊಟ್ಟು, ನಾನು ಬೆಣ್ಣೆ-ಬೆಲ್ಲ ಸೇರಿಸಿ ದೋಸೆ ತಿನ್ನುವ ನನ್ನ ಸಂತೋಷವನ್ನು ನೋಡುತ್ತ ಆನಂದ ಪಡುತ್ತಿದ್ದಳು. ಇನ್ನೊಂದು ಪ್ರಕರಣವೂ ನನ್ನ ನೆನೆಪಿಗೆ ಯಾವಾಗಲೂ ಬರುತ್ತಿದೆ. ನಾನು ಬನರಸ್‍ನಲ್ಲಿ ಓದುತ್ತಿದ್ದ ಕಾಲವದು. ಒಮ್ಮೆ ರಜೆಗೆಂದು ಮನೆಗೆ ಬಂದಾಗ, ಮಗನಿಗೆ ತಿಂಡಿ ಮಾಡಿ ಕಳುಹಿಸಲೆಂದು ತಂಬಿಟ್ಟು ಮತ್ತು ಚಕ್ಕುಲಿಗಳನ್ನು ಮಾಡಿದಳು. ತಿಂಡಿ ಮಾಡುವಾಗಲೇ ಹೇಳಿದ್ದಳು, `ನಾಗಪ್ಪಯ್ಯ, ಇದನ್ನು ಜೋಪಾನವಾಗಿ ನಿನ್ನ ರೂಮಿನಲ್ಲೇ ಇಟ್ಟುಕೊಂಡು ತಿನ್ನು, ಸ್ನೇಹಿತರೆಂದು ಎಲ್ಲರಿಗೂ ಧರ್ಮ ಮಾಡಿ ಎರಡೇ ದಿನಗಳಲ್ಲಿ ಮುಗಿಸ ಬೇಡ' ಎಂದು. ಎಂತಹ ಸ್ವಾರ್ಥ ಪ್ರೀತಿ ಎಂದೆನಿಸುವುದಲ್ಲವೇ? ಹೌದು, ಆದು ಅಮ್ಮನ ಸ್ವಾರ್ಥ ಪ್ರೇಮ. ಹಾಗೆ ಮಾಡಿದ ಆ ತಿಂಡಿಗಳನ್ನು ಡಬ್ಬಗಳಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದಳು. ಆದರೆ `ತಿಂಡಿಪೋತ' ಈ ಮಗ ಅದನ್ನು ಹೇಗೋ ಪತ್ತೆ ಹಚ್ಚಿ, ಎಲ್ಲವನ್ನೂ ಖಾಲಿ ಮಾಡಿಬಿಟ್ಟಿದ್ದ. ನಾನು ಮನೆಯಿಂದ ಹೊರಡುವ ಎರಡು ದಿನಗಳ ಮುನ್ನ ನನ್ನ ತಾಯಿ ತಿಂಡಿ ಎಲ್ಲ ನಾಪತ್ತೆಯಾದುದನ್ನು ಗಮನಿಸಿದಳು. ಆದರೂ, ಕಷ್ಟವಾದರೂ ತಿರುಗಿ ನನಗೆ ತಿಂಡಿ ಮಾಡಿಕೊಟ್ಟಿದ್ದಳು. ತಾಯಿಯ ಆ ಪ್ರೀತಿಯನ್ನು ಆ ತಿಂಡಿ ತಿನ್ನುವಾಗಲೆಲ್ಲ ಸವಿದಿದ್ದೆ. ಮಾತ್ರವಲ್ಲ, ಅವನ್ನು ಗೆಳೆಯರೊಡನೆ ದುಬಾರಿಯಾಗಿ ಹಂಚಿಕೊಳ್ಳದೆ, ತುಂಬ ದಿನ ಇಟ್ಟುಕೊಂಡು ತಿಂದಿದ್ದೆ.
ಹಿಂದೆ ನಾನು ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಒಂದು ಸಾಮಾನ್ಯ ಸಂಗತಿ ಇದು. ಆಗ ನನ್ನವಳು ಅರವಿಂದನನ್ನು ಹಡೆದು, ತವರುಮನೆ, ಮೇಳಿಗೆಯಲ್ಲಿದ್ದಿದ್ದಳು. ನನ್ನ ತಾಯಿ ನನ್ನವಳಿಗೆ ಅನುಕೂಲವಾಗಲೆಂದು ಎರಡು ವರ್ಷದ ಅನುರಾಧಳನ್ನು ಕೋಟಕ್ಕೆ ಕರೆದು ತಂದಿದ್ದಳು. ಕೋಟದಿಂದ ಪ್ರತಿ ಸೋಮವಾರ ಹೊರಟು ಶುಕ್ರವಾರದವರೆಗೂ ಮಣಿಪಾಲದಲ್ಲಿದ್ದು, ಶುಕ್ರವಾರ ಸಾಯಂಕಾಲ ಕೋಟಕ್ಕೆ ಮರಳಿ ಬರುತ್ತಿದ್ದು, ವಾರಾಂತ್ಯವನ್ನು ಅನುರಾಧಳ ಜತೆ ಕಳೆಯುತ್ತಿದ್ದೆ. ಅನುರಾಧಳು ನನ್ನ ತಾಯಿಯ ಜತೆ ಹೊಂದಿಕೊಂಡು ಸಂತೋಷದಲ್ಲೇ ಇರುತ್ತಿದ್ದಳು. ಆದರೆ ಶುಕ್ರವಾರ ಸಂಜೆ ನಾನು ಮರಳಿ ಬಂದಾಗ `ಅಪ್ಪಾ....' ಎಂದು ನನ್ನ ಬಳಿ ಓಡಿ ಬಂದು ನನ್ನನ್ನು ತಬ್ಬಿಕೊಳ್ಳುತ್ತಿದ್ದಳು. ಅವಳಿಗೆ ತಿಳಿಯದಂತೆ ವ್ಯಾಮೋಹವು ಅವಳನ್ನು ಆವರಿಸಿತ್ತು. ನನ್ನ ತಾಯಿಯು `ಇಷ್ಟು ದಿನ ನಾನು ಬೇಕಾಗಿತ್ತು; ಈಗ ನೋಡು ಅಪ್ಪನ ಹತ್ತಿರ ಓಡುತ್ತಿರುವುದು! ಅಪ್ಪನನ್ನು ಕಂಡದ್ದು ನೀನೇ ಸರಿಯೇ?' ಎಂದು ಒಮ್ಮೆ ಕುಚೋದ್ಯ ಮಾಡಿದಳು. ಹಾಗೆನ್ನುತ್ತಲೇ ` ಬಾ ಮರಿ, ನೀನು ಹಾಲು ಕುಡಿಯುವ ಸಮಯವಾಯ್ತು' ಎಂದು ನನ್ನಿಂದ ಅನುರಾಧಳನ್ನು ಕರೆದುಕೊಂಡಳು. ಅಮ್ಮ ಎಂಬ ವ್ಯಕ್ತಿತ್ವದಲ್ಲಿ ಬೆರೆತ ಮಮತೆಯು ಅದೆಷ್ಟು ಅಗಾಧವಾದುದು ಎಂಬುದು ಈ ಪ್ರಕರಣದಿಂದ ವ್ಯಕ್ತವಾಗುವುದು.
ಬೆಳಗಿನ ಹೊತ್ತು ಒಂದು ದಿನ ಸುಮಾರು ೬ - ೬:೩೦ ಗಂಟೆಯಾಗಿರಬೇಕು, ನಾನು `ರಾಮ, ರಾಮಾ..' ಎಂದುಸುರಿದೆ. ಆಗ ನನ್ನ ತಾಯಿ `ಮಗೂ, ಬೆಳಗಿನ ಹೊತ್ತು ರಾಮ ಜಪ ತಕ್ಕುದಲ್ಲ' ಎಂದು ಹೇಳಿದಾಗ ನನಗೆ ಆಶ್ಚರ್ಯವಾಯಿತು. ಅದಕ್ಕೂ ಹೆಚ್ಚಿನ ಆಶ್ಚರ್ಯವೆಂದರೆ ಆಕೆ ಕೊಟ್ಟ ವಿವರಣೆ. `ನೋಡು, ಶ್ರೀರಾಮ ಶಿವ ಭಕ್ತ. ಬೆಳಗಿನ ಜಾವ ಆತ ಜಪ-ತಪದಲ್ಲಿ ತಲ್ಲೀನನಾಗಿರುತ್ತಾನೆ. ಆಗ ಹನುಮಂತನು ಆತನನ್ನು ಕಾದುಕೊಂಡಿರುತ್ತಾನೆ. ಪ್ರತಿ ಬಾರಿ -ರಾಮ- ಎಂದಾಗಲೆಲ್ಲ ಹನುಮಂತನ ನಾಮವೂ `ಓ'ಗೊಡುವಂತೆ ತಪ್ಪದೆ ಅನುಸರಿಸಿ ಬರುವುದು. ಆದರೆ ಶ್ರೀರಾಮನೇ ಜಪದಲ್ಲಿದ್ದಾಗ, ಅವನನ್ನು ಕಾಯುತ್ತಿರುವ ಹನುಮಂತನ ನಾಮವೂ `ಓ'ಗೊಟ್ಟು ಅನುಸರಿಕೊಂಡು ಬರಲಾಗುವುದಿಲ್ಲ. ಹಾಗಾಗಿ ಅಂತಹ ಸಮಯದಲ್ಲಿ ರಾಮನಾಮೋಚ್ಛಾರಣೆಯು ನಿಷ್ಫಲವಾಗುವುದು. ರಾಮ ನಾಮದ ಹಿಂದೆ ಹನುಮಂತನ ನಾಮವೂ ಅನುಸರಿಸಿ ಬಂದರೇನೇ ಆ ಜಪಕ್ಕೆ ತಕ್ಕ ಫಲ; ಇಲ್ಲವಾದರೆ ಅದು ವ್ಯರ್ಥವೇ ಸರಿ'. ಎಂತಹ ಅಪೂರ್ವ ವಿಚಾರ ಸರಣಿ! ಅವಳು ಅನಕ್ಷರಳಾಗಿರಬಹುದು; ಆದರೆ ಅವಿದ್ಯಾವಂತೆಯಂತೂ ಅಲ್ಲವೇ ಅಲ್ಲ! ಅವಳ ಜ್ಞಾನ ಬಂಢಾರ ಅದೆಷ್ಟು ಅದ್ಭುತವಾದುದು! ಇದು, ನನಗೆ ಅವಳ ಮೇಲಿರುವ ಗೌರವವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿತು.