ಒಂದು ವಿಶಿಷ್ಟ ಬಗೆಯ 'ಮನೆ' ಕಟ್ಟ ಹೊರಟಿರುವ ಮಂಜುನಾಥ್, ವೃತ್ತಿಯಲ್ಲಿ ವೈದ್ಯರಾಗಿದ್ದು ಅಮೆರಿಕಾದ ಟೆಕ್ಸಾಸ್ ರಾಜ್ಯದ ಮಿಡ್‍ಲ್ಯಾಂಡ್‍ನಲ್ಲಿ ವಾಸವಾಗಿದ್ದಾರೆ - ಸಂ
ಓಡೋಡಿ ಬಾ ಗೆಳತಿ, ಬಾ ಬಾಳ ಸಂಗಾತಿ
ಒಂದಾಗಿ ಸೇರಿ ನಾವು ಮನೆಯ ಕಟ್ಟೋಣ
ನೇಸರನ ಮಡಿಲಲ್ಲಿ, ತಾರೆ ಚಪ್ಪರದಡಿ
ಸ್ನೇಹ ಸೌಹಾರ್ದತೆಯ ಬಾಗಿಲನು ತೆರೆಯೋಣ
ಹರುಷದ ಹಸಿರ ತೋರಣವ ತೂಗಿಟ್ಟು
ಸಂತೃಪ್ತಿ ದೇವರನು ಅರಸಿ ಮೆರೆಸೋಣ
ನೆರೆಹೊರೆಯ ಒಲವದುವೆ ಈ ಮನೆಗೆ ಅಡಿಗಲ್ಲು
ಧರ್ಮ ಸಂಸ್ಕೃತಿಯ ಕಂಬಗಳ ನಿಲಿಸೋಣ
ನವ ವಿಚಾರಗಳ ಕಿಟಕಿಗಳ ತೆರೆದಿಟ್ಟು
ಜ್ಞಾನ ವಿಜ್ಞಾನಗಳ ಬೆಳಕು ಹರಿಸೋಣ
ಗುರುಹಿರಿಯ ವೃಕ್ಷಗಳ ತಂಪಾದ ನೆರಳಿನಲಿ
ಕಿರಿಯ ಸಂತತಿಯ ಹೂವು ಬೆಳೆಸೋಣ
ಸಂತಸದ ಮಂದಿರದೆ ಮಂದಹಾಸದ ಕಂಪು
ದಿನನಿತ್ಯ ದೇವತೆಗಳ ನಲಿವು ನಲಿಯೋಣ
-ಮಂಜುನಾಥ್
ಟೆಕ್ಸಸ್, ಯು.ಎಸ್.ಎ