NavigationUser loginWho's onlineThere are currently 0 users and 2 guests online.
|
ಬಿರುದು ಬೇಡದ `ಹಾಡು ಹಕ್ಕಿ'ಗೆ `ರಾಷ್ಟ್ರಕವಿ' ಸನ್ಮಾನಎಲ್ಲರಿಗೂ ೫೦ನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಈ ಸಂದರ್ಭದಲ್ಲಿ ರಾಷ್ಟ್ರಕವಿ ಬಿರುದಿಗೆ ಪಾತ್ರರಾಗಿರುವ ಜಿ.ಎಸ್.ಶಿವರುದ್ರಪ್ಪನವರ ಕುರಿತು ಆಹಿತಾನಲರ ಲೇಖನ - ಸಂ. ಸುವರ್ಣ ಕರ್ನಾಟಕ ಉತ್ಸವದ ಸಮಯ ಒಂದು ಶುಭ ಸಮಾಚಾರ ಕೇಳಿದೆ - ನಮ್ಮ ನೆಚ್ಚಿನ ಕವಿ, ಜಿ. ಎಸ್. ಶಿವರುದ್ರಪ್ಪನವರಿಗೆ `ರಾಷ್ಟ್ರಕವಿ' ಪ್ರಶಸ್ತಿ ದೊರಕಿತು ಎಂದು. ಇದೊಂದು ಅವರಿಗೆ ನ್ಯಾಯವಾಗಿ ಸಿಗಬೇಕಾದ ಗೌರವವೇ! ಆ ಸುದ್ದಿಯನ್ನು ಮಾಧ್ಯಮದಲ್ಲಿ ಓದುತ್ತಿದ್ದಂತೆ ನನ್ನ ಸ್ಮರಣೆ ಹಿಂದೆ ನಾನು ಅವರೊಡನೆ ಕಳೆದ ಕೆಲವು ದಿನಗಳ ಕಡೆಗೆ ಹರಿದು, ಮನಸ್ಸು ಉಲ್ಲಾಸದಿಂದ ಉಕ್ಕುವಂತೆ ಮಾಡಿತು. ಅವರು ಕೆಲವು ವರ್ಷಗಳ ಹಿಂದೆ, ಸುಮಾರು ಒಂದು ವಾರ ನಮ್ಮ ಶಿಕಾಗೋ ನಿವಾಸದಲ್ಲಿ (ಈಗ ನಾವು ಕ್ಯಾಲಿಫೋರ್ನಿಯಕ್ಕೆ ಬಂದು ನೆಲೆಸಿದ್ದೇವೆನ್ನಿ!) ನಮ್ಮೊಡನೆ ಕಳೆದಿದ್ದರು. ಆಗ ಅವರೊಡನೆ ನಡೆಸಿದ `ಸಾಹಿತ್ಯ ಸಂವಾದ' ನನ್ನ ಮನಸ್ಸಿನಲ್ಲಿ ಒಂದು ಅಳಿಯದ ಸ್ಮರಣೆಯಾಗಿ ಉಳಿದಿದೆ. ಅಮೆರಿಕಕ್ಕೆ ಬಂದಾಗಲೆಲ್ಲ ಸಾಮಾನ್ಯವಾಗಿ ನಮ್ಮ ಮನೆಗೂ ಅವರು ಭೇಟಿ ಕೊಡುತ್ತಿದ್ದರು. ಅಂತಹ ಒಂದು ಭೇಟಿ ಸಮಯದಲ್ಲಿ ಕಾಫಿ ಟೇಬಲ್ ಮುಂದೆ, ನಮ್ಮ-ನಮ್ಮಲ್ಲಿ ನಡೆದ ಸಾಹಿತ್ಯ ಸಂವಾದದ ಫಲವೇ ಈ ಲೇಖನ. ನನ್ನಾಕೆ ಲಕ್ಷ್ಮಿಯೂ, ಈ ನಮ್ಮ ಸಂಭಾಷಣೆಗಳಲ್ಲಿ ಭಾಗವಹಿಸಿ, ಜಿ.ಎಸ್.ಎಸ್. ಅವರಿಂದ ಅನೇಕ ಅಭಿಪ್ರಾಯಗಳನ್ನು ಪಡೆಯುವುದರಲ್ಲಿ ಸಹಭಾಗಿಯಾಗಿದ್ದಾಳೆ. ನಮ್ಮ ಸಾಹಿತ್ಯ ಸಂವಾದಕ್ಕೆ ಚಾಲನೆ ಕೊಟ್ಟುದು ಅವರ `ಕಾಣದ ಕಡಲಿಗೆ ಹಂಬಲಿಸುತಿದೆ ಮನ....' ಎಂಬ ಹಾಡು. ನಾನು ಅಂದು ಆ ಹಾಡನ್ನು ಅಶ್ವಥ್ ಅವರು ಜೋಡಿಸಿದ ರಾಗದಲ್ಲಿ ಗುನುಗುತ್ತಿದ್ದೆ. ಆಗ ಅವರನ್ನು ಕೇಳಿದ್ದೆ: `ನಿಮಗೆ ಆ ಹಾಡನ್ನು ಬರೆಯಲು ಪ್ರೇರಣೆ ಯಾವುದು....?' ಎಂದು. ನಾನಂತೂ `ಕಾಣದ ಕಡಲ'ನ್ನು ಭಗವಂತನೆಂದು ವ್ಯಾಖ್ಯಾನಿಸಿದ್ದೆ. ಆದರೆ ಆ ಕವನವನ್ನು ಬರೆಯಲು ಅವರ ಉದ್ದಿಶ್ಯ ನನ್ನ ಊಹೆಯಂತಿರಲಿಲ್ಲ. ತಮ್ಮೊಳಗೇ ಕುದಿಯುತ್ತಿರುವ - ಕವನ ಬರೆಯಬೇಕು, ಕವಿಯಾಗಬೇಕು, ಬದುಕಿನ ಅಂದ ಚೆಂದ, ನೋವು-ನಲಿವುಗಳನ್ನೂ, ಪ್ರಕೃತಿ-ಜೀವನಗಳ ಸಂಬಂಧವನ್ನೂ ಅರಿತು, ಅವನ್ನು ಕವನಗಳ ಮೂಲಕ ಅಭಿವ್ಯಕ್ತಗೊಳಿಸುವ ಒಂದು ತವಕ, ಮಹತ್ವಾಕಾಂಕ್ಷೆಯೇ ಬಹುಶಃ ಆ ಕವನ ಬರೆಯಲು ಪ್ರೇರಣೆ ಒದಗಿಸಿಕೊಟ್ಟಿರಬಹುದು ಎಂದರು, ಅವರು. `ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದಿಗೂ ಕೇಳುತಿದೆ' ಎಂಬುದೇ ಆ ಮಹತ್ವಾಕಾಂಕ್ಷೆಗೆ ಪ್ರೇರಣೆಯಾಗಿರಬೇಕು. ಆ ಅಕಾಂಕ್ಷೆಗೆ ಮೇರೆ ಇಲ್ಲ; ಸಾಗರದ ಅಪಾರತೆಯನ್ನು ಕೂಡುವ ಏಕೈಕ ಹಂಬಲ ಮಾತ್ರ. ಇದು, ಕುವೆಂಪುರವರ `ಅನಿಕೇತನ' ಕವನವನ್ನು ನೆನಪಿಸುತ್ತದೆ. `ಓ ನನ್ನ ಚೇತನ, ಆಗು ನೀ ಅನಿಕೇತನ....' ಎಂದು ತಮ್ಮೊಳಗಿನ ಚೇತನವನ್ನು ಹೊಡೆದೆಬ್ಬಿಸಿ, ಎಲ್ಲ ಮೇರೆಗಳನ್ನು ಮೀರಿ `ಅನಂತವಾಗಿ'ರಲು ಪ್ರಚೋದಿಸುತ್ತಾರೆ ಕುವೆಂಪು ತಮ್ಮ ಕವನದಲ್ಲಿ. `ಕಾಣದ ಕಡಲಿ'ನಲ್ಲೂ ಅಂತಹದೇ ಮರುಧ್ವನಿ ಕೇಳಿಸುತ್ತದೆ. ಕುವೆಂಪುರವರ ಹೆಸರು ಬಂದಾಗಲೆಲ್ಲ ಜಿ.ಎಸ್.ಎಸ್. ಅವರ ಕಂಠ ಗದ್ಗರಿಸುತ್ತದೆ, ಕಣ್ಣಿಂದ ಕೃತಜ್ಞತಾ ಭಾವನೆ ಹರಿದು ಬರುತ್ತದೆ. ತಮ್ಮ ಮಾರ್ಗದರ್ಶಕ, ಗುರು, ತನ್ನಲ್ಲಿರುವ ಆಸಕ್ತಿಯನ್ನು ಪ್ರಚೋದಿಸಿದವರು, ಎಂದೆಲ್ಲ ನೆನೆದಾಗ ಅವರಲ್ಲಿ ನಮ್ರತೆಯ ಭಾವನೆ ಉಕ್ಕಿ ಹರಿಯುವುದು ಸ್ಪಷ್ಟವಾಗುತ್ತದೆ. ಅವರ ಕೃತಜ್ಞತೆಯು ಈ ಕೆಳಗಿನ ಕವನದ ಸಾಲುಗಳಲ್ಲಿ ವ್ಯಕ್ತವಾಗುವುದು: `ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ, ಗುಟ್ಟುಗಳ. ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವುದನ್ನು, ಕಿರುಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆಯುವುದನ್ನು, ಸದ್ದಿರದೆ ಬದುಕುವುದನ್ನು. ಎಷ್ಟೊಂದು ಕೀಲಿ ಕೈಗಳನು ದಾನ ಮಾಡಿದ್ದೀರಿ ವಾತ್ಸಲ್ಯದಿಂದ; ನಾನರಿಯದನೇಕ ಬಾಗಿಲುಗಳನು ತೆರೆದಿದ್ದೀರಿ ನನ್ನೊಳಗೆ; ಕಟ್ಟಿ ಹರಸಿದ್ದೀರಿ ಕಂಕಣವನ್ನು ಕೈಗೆ.' ಇದಕ್ಕಿಂತ ಹೆಚ್ಚಿನ ಗೌರವ ಯಾವ ಗುರು ಪಡೆದಾನು? ಕುವೆಂಪು ಅವರ ಮಾರ್ಗದರ್ಶನದಲ್ಲಿ ಕನ್ನಡದಲ್ಲಿ ಪಿಎಚ್.ಡಿ. ಪದವಿ (`ಸೌಂದರ್ಯ ಸಮೀಕ್ಷೆ' ಎಂಬ ಪ್ರೌಢ ಪ್ರಬಂಧಕ್ಕೆ) ಪಡೆದ ಇಬ್ಬರಲ್ಲಿ ಇವರೊಬ್ಬರು ಎಂಬುದನ್ನು ಇಲ್ಲಿ ನೆನೆಯಬಹುದು. (ಇನ್ನೊಬ್ಬರು ಶ್ರೀ ಪ್ರಭುಶಂಕರ ಅವರು.) ಕುವೆಂಪುರವರ ಪ್ರೋತ್ಸಾಹದಿಂದಲೇ ಅವರಿಗೆ ರಾಮಕೃಷ್ಣ ಆಶ್ರಮದ ಸಂಪರ್ಕ ಬೆಳೆದಿತ್ತು. ಕುವೆಂಪುರವರ ರಾಮಕೃಷ್ಣ ಆಶ್ರಮದ ಮೇಲಿನ ಅಚಲ ಆಸಕ್ತಿಯನ್ನು ವಿವರಿಸುತ್ತ, 'Kuvempu is a voice in Kannada for Vivekananda' ಎನ್ನುತ್ತ ಗುರುವಿಗೆ ತಮ್ಮ ವಿಶೇಷ ಗೌರವವನ್ನು ಸಲ್ಲಿಸುತ್ತಾರೆ. ಸಾಹಿತ್ಯಕ್ಕೂ, ಜನಜೀವನಕ್ಕೂ ಇರುವ ನಿಕಟ ಸಂಬಂಧವನ್ನು ಜಿ.ಎಸ್.ಎಸ್. ಅವರು ಈ ರೀತಿ ಸ್ವಾರಸ್ಯವಾಗಿ ವಿವರಿಸುತ್ತಾರೆ: ಸಾಹಿತ್ಯವೆಂದರೆ `ಜೀವನವನ್ನು ಗ್ರಹಿಸುವ ಮತ್ತು ವ್ಯಾಖ್ಯಾನಿಸುವ ಕ್ರಮ'. ಇದು ಕವಿಯ ಮುಖ್ಯ ಉದ್ದಿಶ್ಯವಾಗಿರಬೇಕು. ಇದಕ್ಕೆ ಅವರ ಕಲ್ಪನಾಶಕ್ತಿಯ ಪ್ರಭಾವ ಹಿನ್ನೆಲೆ ಒದಗಿಸುತ್ತದೆ. ವಾಸ್ತವಿಕ ಸಂಗತಿಗಳ ಎಲ್ಲೆಯನ್ನೂ ಮೀರಿದ ಈ ಮಹಾ ಶಕ್ತಿಯು ಕವಿತೆಯಲ್ಲಿ ಮೂಡಿ ಬರಬೇಕು. Colridgeರು ಹೇಳಿದ The willing suspension of disbelief for the moment constitutes the poetic faith - ಎಂಬ ಮಾತನ್ನು ವ್ಯಾಖ್ಯಾನಿಸುತ್ತ, ಆ ನಿಲುವಿಗೂ ತಮ್ಮ ನಿಲುವಿಗೂ ಇರುವ ವ್ಯತ್ಯಾಸವನ್ನು ಈ ರೀತಿ ವಿವರಿಸಿದರು. ತಮ್ಮ ಭಾವನೆಯಲ್ಲಿ 'disbelief' ಎಂಬುದೇ ಇಲ್ಲ; ಪರಿಣಾಮವಾಗಿ ಅದನ್ನು 'suspend' ಮಾಡುವ ಅವಶ್ಯಕತೆಯೇ ಬರುವುದಿಲ್ಲ. ಏನೊಂದೂ ಅನುಮಾನಾಸ್ಪದವಿಲ್ಲದೇ ಕವಿಯು ನೀಡಿದ ಆ ಕಲ್ಪನಾಲೋಕಕ್ಕೆ ಓದುಗರನ್ನು ಕರೆದೊಯ್ಯುವ ಚಮತ್ಕಾರ ಕವನದಲ್ಲಿರಬೇಕು. ಉದಾಹರಣೆ ಕೊಡುತ್ತ ಅವರು ಪು.ತಿ.ನ. ಅವರ ಒಂದು ಕವನದ ಸಾಲನ್ನು ಉಲ್ಲೇಖಿಸಿದರು: `ಎದೆತುಂಬ ಹಾಡಿದೆನು': ತಮ್ಮ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ ಹಲವರನ್ನು ನೆನೆಸಿಕೊಳ್ಳುತ್ತ, ಶ್ರೀ ತ. ಸು. ಶಾಮರಾಯರು ನೀಡಿದ ಪ್ರೋತ್ಸಾಹವನ್ನು ಮನಸಾರೆ ಹೊಗಳುತ್ತಾರೆ, ಜಿ.ಎಸ್.ಎಸ್. ಶಾಮರಾಯರನ್ನು `ವಾತ್ಸಲ್ಯದ ಪ್ರತಿಮಾ ಸ್ವರೂಪರು' ಎಂದೂ, (ಅದೇ ಶೀರ್ಷಿಕೆಯಲ್ಲಿ ತಮ್ಮ `ಚದುರಿದ ಚಿಂತನೆಗಳು' ಎಂಬ ಪ್ರಬಂಧ ಸಂಕಲನದಲ್ಲಿ ಶಾಮರಾಯರಿಗೆ ಗೌರವ ಸಲ್ಲಿಸಿದ್ದಾರೆ) ಅವರ ವಾತ್ಸಲ್ಯವೇ ಇಂದು ತಾನೊಬ್ಬ ಕವಿ ಎಂದೆನಿಸಿಕೊಳ್ಳುವಂತಾಗಿದೆ ಎಂದು ಬಿಗಿದ ಕಂಠದಲ್ಲಿ ನುಡಿಯುತ್ತ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ತಾವು ಎಳೆಯ ವಯಸ್ಸಿನಲ್ಲಿ ಬರೆದ ಹಲವು ಕವನಗಳನ್ನು ಅವರ ಒತ್ತಾಯದಿಂದಲೇ ಅವರ ಮುಂದೆ ಓದಿದಾಗ ಅವರು ನೀಡಿದ ಬೆಂಬಲ, ಸಲಹೆ, ಮೆಚ್ಚುಗೆಗಳು ತಮಗೆ ಅಪಾರ ಪ್ರೋತ್ಸಾಹವನ್ನು ದೊರಕಿಸಿಕೊಟ್ಟಿದೆ ಎಂದು ಹೇಳಿದರು. ಜೀವನ ಮತ್ತು ಪ್ರಕೃತಿ ಸಂಬಂಧಗಳ ಬಗ್ಗೆ ಮಾತನಾಡುವಾಗ ಅವರು ತುಂಬ ಉತ್ಸಾಹಭರಿತರಾಗುತ್ತಾರೆ. ಸಸ್ಯಗಳು ಹುಟ್ಟಿ, ಬೆಳೆದು, ಫಲಿಸಿ, ಸಾಯುವಂತೆ ಮನುಷ್ಯ ಜೀವನವೂ ಅದೇ ಕ್ರಮಗಳನ್ನು ಅನುಸರಿಸುತ್ತದೆ. ಪ್ರಕೃತಿಗೂ ಜನಜೀವನಕ್ಕೂ ನಿಕಟವಾದ ಸಂಬಂಧವಿದೆ. ಪ್ರಕೃತಿಯ ವಿಸ್ತೃತವೇ ಮಾನವ ಜೀವನ. ನಮಗೆ ಪ್ರಕೃತಿಯ ಮೇಲೆ ಭಕ್ತಿಭಾವವಿರಬೇಕೆಂಬುದು ಅವರ ದೃಢ ನಂಬಿಕೆ. ಆ ಭಕ್ತಿಗೆ ಪ್ರೀತಿಯೇ ಕಾರಣ. ಅವರ `ಪ್ರೀತಿ ಇಲ್ಲದ ಮೇಲೆ' ಎಂಬ ಕವನದ ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ? ಮೋಡ ಕಟ್ಟಿತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡಿತು ಹೇಗೆ? ಸಾಲುಗಳಲ್ಲಿ ಮಾನವನು ಪ್ರಕೃತಿಯಿಂದ ಕಲಿತುಕೊಳ್ಳಬೇಕಾದ ಅಂಶಗಳೆಷ್ಟು ಎಂಬುದು ವ್ಯಕ್ತವಾಗುತ್ತದೆ. ಪ್ರಕೃತಿಯ ಅಪಾರ ಸೊಬಗು, ನಿಸರ್ಗವಾಡುವ ಬೆಡಗಿನಾಟವನ್ನು ಅನುಭವಿಸಲು ಮನುಷ್ಯನು ಸಂಪೂರ್ಣ ಅದರಲ್ಲಿ ಕರಗ ಬೇಕು. ನೋಡು ಇದೊ ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ ಇಷ್ಟು ಹಚ್ಚನೆ ಹಸಿರು ಗಿಡದಿಂ ದೆಂತು ಮೂಡಿತೊ ಬೆಳ್ಳಗೆ `ಮಲ್ಲಿಗೆ' ಕವನದಿಂದ ಆರಿಸಿದ ಈ ಸಾಲುಗಳು ಹಚ್ಚ ಹಸಿರು ಮಲ್ಲಿಗೆ ಬಳ್ಳಿಯಲ್ಲಿ ಅರಳಿದ ಅಚ್ಛ ಬೆಳ್ಳಗಿನ ಹೂವಿನ ಹುಟ್ಟು ಅಚ್ಚರಿಯನ್ನು ಮೂಡಿಸುತ್ತದೆ. ಇದನ್ನು ಅನುಭವಿಸುವ ಅಭಿರುಚಿಯನ್ನು ಕವಿ ತನ್ನ ಕವನದಿಂದ ಓದುಗರಲ್ಲಿ ಮೂಡಿಸುತ್ತಾನೆ. `To love Life is to live Life' ಎಂಬ ಟಾಲ್ಸ್ಟಾಯರ ಮಾತನ್ನು ತಾನು ಅಕ್ಷರಶ ನಂಬುತ್ತೇನೆಂದು ಜಿ.ಎಸ್.ಎಸ್. ಹೇಳುತ್ತಾರೆ. ಹೀಗೆ, ಪ್ರಕೃತಿಯನ್ನು ಪ್ರೀತಿಸಿ, ಬದುಕನ್ನು ಆದರಿಸುವುದೇ ನಿಜ ಜನ ಜೀವನ ಕ್ರಮವೆಂಬುದು ಅವರ ನಿಲುವು. ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೆ ಇರುವ ಪ್ರೀತಿ-ಸ್ನೇಹಗಳ ಗುರುತಿಸದಾದೆನು ನನ್ನೊಳಗೆ `ಅನ್ವೇಷಣೆ' ಕವನದ ಈ ಸಾಲುಗಳು ಅವರ ದೇವರ ಮೇಲಿನ ನಂಬಿಕೆಯ ಮೇಲೆ ಸಾಕಷ್ಟು ಬೆಳಕನ್ನು ಚೆಲ್ಲುತ್ತವೆ. ಇಲ್ಲಿಯೂ, ಪ್ರೀತಿ-ಸ್ನೇಹಗಳೇ ದೇವರ ಇರುವನ್ನು ಅನುಭವಿಸುವ ಸಾಧನವೆಂಬುದು ವ್ಯಕ್ತವಾಗುತ್ತದೆ. `ಅವ್ಯಕ್ತಾದೀನಿ ಭೂತಾನಿ ವ್ಯಕ್ತ ಮಧ್ಯಾನಿ ಭಾರತ, ಅವ್ಯಕ್ತನಿದಾನಾನೈವ ತತ್ರ ಕಾ ಪರಿದೇವನಾ' ಎಂಬ ನುಡಿಯೇ ಈ ಸಂಕಲನಕ್ಕೆ ಪ್ರೇರಕವಾದದ್ದು ಎಂದು ವಿವರಿಸಿದರು. ಅಲ್ಲಿ ಮೂಡಿಬಂದಂತೆ, ನಮ್ಮ ಪ್ರಸ್ತುತ `ಜೀವನ'ವೊಂದೇ `ವ್ಯಕ್ತ'ವಾದುದು; ಅದಕ್ಕೂ ಹಿಂದಿನ ಮತ್ತು ಮುಂದಿನದೆಲ್ಲವೂ `ಅವ್ಯಕ್ತ'ವಾದುದು. ಈ `ಅವ್ಯಕ್ತ'ಗಳ ಮಧ್ಯದ `ವ್ಯಕ್ತ' ಜೀವನವನ್ನು ಸಂತೋಷದಿಂದ ಅನುಭವಿಸುವ ಆಶಾವಾದ ಅವರದು. ಇದು ಅವರ `ಅವಸ್ಥೆ' ಎಂಬ ಕವನದಲ್ಲಿ ಸೊಗಸಾಗಿ ಮೂಡಿ ಬಂದಿದೆ. `ದತ್ತವಾಗಿದೆ ಮತ್ತೆ ವ್ಯಕ್ತಮಧ್ಯದ ಬದುಕು ಮೊದಲಿಗಿಂತಲೂ ಸೊಗಸಾಗಿ ಕಂಡಿತು ಲೋಕ ಈ ವರೆಗೂ ಮಹಾವಿಸ್ಮೃತಿಯಲ್ಲಿ ಕರಗಿ ಹೊರಗೆ ಬಂದ ಅಸ್ಥಿತ್ವಕ್ಕೆ ಎಲ್ಲವನ್ನೂ ತಬ್ಬಿಕೊಳ್ಳುವ ತವಕ' ಇಲ್ಲಿ ಬದುಕು `ದತ್ತವಾಗಿದೆ' ಎಂಬ ಪ್ರಯೋಗವು ಗಮನಾರ್ಹವಾದುದು. (ನಾನು `ದತ್ತ'ವೆಂಬ ಶಬ್ದಕ್ಕೆ `ಉಡುಗೊರೆ' ಎಂದು ಅರ್ಥ ಮಾಡಿರುತ್ತೇನೆ.) ಈ `ಉಡುಗೊರೆ'ಯನ್ನು ತುಂಬು ಮನಸ್ಸಿನಿಂದ ಆದರಿಸಿ ಆನಂದದಿಂದ ಅನುಭವಿಸುವುದೇ ತೃಪ್ತಿ. ಈ ತೃಪ್ತಿಯೇ ಬದುಕಿನ ತೆರ ತೆರನಾದ ನೂತನ ಸೌಂದರ್ಯಗಳನ್ನು ಅನಾವರಣ ಮಾಡುತ್ತದೆ. ಇದು `ಮೊದಲಿಗಿಂತಲೂ ಸೊಗಸಾಗಿ ಕಂಡಿತು ಲೋಕ', `ಎಲ್ಲವನು ತಬ್ಬಿಕೊಳ್ಳುವ ತವಕ' ಎಂಬ ಸಾಲುಗಳಲ್ಲಿ ವ್ಯಕ್ತವಾದಂತಿದೆ. `ಅವಸ್ಥೆ' ಕವನವನ್ನು ಅವರು ತಮ್ಮ ಹೃದಯ ಶಸ್ತ್ರಚಿಕಿತ್ಸೆ ಮುಗಿದ ಮೇಲೆ, `ಅರಿವಳಿಕೆ'ಯಿಂದ (anaesthesia) ಎಚ್ಚೆತ್ತು ಬಂದಾಗ ಅನುಭವಿಸಿದ ನೂತನ `ಅವಸ್ಥೆ'ಯ ಅನುಭವವನ್ನು ವಿವರಿಸಲು ಬರೆದುದು. ಈ ಅವಸ್ಥೆಯು, - ಜಾಗ್ರತೆ, ಸ್ವಪ್ನ, ಸುಷುಪ್ತಿ ಮತ್ತು ತುರೀಯ -ಎಂಬ ನಾಲ್ಕು ಅವಸ್ಥೆಗಳ ಲಕ್ಷಣಗಳಲ್ಲಿ ಒಂದೇ? ಅಥವಾ ಭಿನ್ನವಾದುದೇ?, ಅದು ಬ್ರಾಂತಿಯೇ?, ಶಾಂತಿಯೇ? ಎಂದು ವಿಸ್ಮಯ ಪಟ್ಟಿದ್ದಾರೆ. `ವ್ಯಕ್ತಮಧ್ಯ'ದ ಸಂಕಲನದಲ್ಲಿ ಕಾಣುವ ಬೇರೆ ಕವನಗಳು - `ಹೂವು-ನಕ್ಷತ್ರ', `ದೀಪ ಚಿಂತನೆ', `ನಟ್ಟಿರುಳಲ್ಲಿ', `ಸ್ತಾವರಕ್ಕೆ ಅಳಿವುಂಟು' `ಕಿಷ್ಕಿಂದೆಯ ಕತ್ತಲಲ್ಲಿ' ಮುಂತಾದವು - ವಿಮರ್ಶಕರಿಗೆ ಬಹಳಷ್ಟು ಗ್ರಾಸ ನೀಡುವುದರಲ್ಲಿ ಸಂಶಯವಿಲ್ಲ. ಆ ಕವನಗಳಲ್ಲಿ ತಾವು ಒಪ್ಪಿಕೊಂಡಿರುವ, ಅಪ್ಪಿಕೊಂಡಿರುವ `ಜೀವನ ದರ್ಶನ'ದ ಪರಿಚಯ ಮಾಡಿ ಕೊಟ್ಟಿದ್ದಾರೆ. ನಮ್ಮ `ಕಾಫಿ ಚುಟುಕ'ದ ಕೊನೆಯ `ಪುಟ್ಟ ಅಧಿವೇಶನ'ದಲ್ಲಿ(mini session) ಅವರನ್ನು ಕೇಳಿದೆ: `ನಿಮ್ಮ ಕವನಗಳು ಸಾರುವ ಮುಖ್ಯ ಸಂದೇಶವೇನು?' ಎಂದು. ಬೇಂದ್ರೆಯವರ ಈ ಕೆಳಗಿನ ಕವನದ ಸಾಲುಗಳನ್ನು ಉದ್ಧರಿಸುತ್ತ, `ಸಾಹಿತ್ಯ ಪ್ರಪಂಚಕ್ಕೆ ನಾನು ಸಲ್ಲಿಸಿದ ಕಾಣಿಕೆ ತೀರ ಕಿರಿದು ಎಂದೆಣಿಸುತ್ತೇನೆ' ಎಂದು ಹೇಳಿದಾಗ ಅವರ ಸೌಜನ್ಯತೆ, ವಿನಯಶೀಲತೆ ಎದ್ದು ಕಾಣುತ್ತಿತ್ತು. `ಹಾಸಾದ ಮಿಂಚಿನಿಂದ ಬೀಸಿದ್ದ ಸೆರಗಿನಿಂದ ಸೆಳದಂತೆ ಎರಡು ನೂಲು ಉಳಿದಾವ ನಾಕು ಸಾಲು' ತಾಯಿಯು ಬೀಸಿದ ಸೆರಗನ್ನು ಮಲಗಿದ ಮಗು ಕೈ ಚಾಚಿ ಸೆಳೆದಾಗ ಸಿಕ್ಕಿದ ಎರಡೇ ಎರಡು ನೂಲಿನಂತೆ, ತಮ್ಮ `ಕೊಡುಗೆ'ಯೂ ಸಾಹಿತ್ಯ ಲೋಕಕ್ಕೆ ಬರಿಯ `ನಾಕು ಸಾಲು' ಎಂಬ ನಮ್ರಭಾವನೆಯನ್ನು ಜಿ.ಎಸ್.ಎಸ್. ಅವರು ವ್ಯಕ್ತಪಡಿಸಿದರು. ಆದರೆ ಅವು ಬರಿಯ `ನಾಕು ಸಾಲು' ಗಳಲ್ಲ; ಅವು `ನಾಕ'ದ ಸಾಲುಗಳೆಂಬುದು ಎಲ್ಲರೂ ಗಮನಿಸುವಂಥ ವಿಷಯವೇ ! `ಹಣತೆ ಹಚ್ಚುತ್ತೇನೆ ನಾನು': `ತಿರುಗುತ್ತಲೇ ಇದ್ದಾವೆ ಹಗಲೂ ಇರುಳು ನಮ್ಮ ಸುತ್ತಲೂ ಅಸಂಖ್ಯಾತ ಜ್ಯೋತಿರ್ಮಂಡಲಗಳು', .................................... `ಆದರೂ, ನಮ್ಮೊಳಗೆ ಮತ್ತೆ ಮತ್ತೆ ಹೇಗೋ ಕವಿಯು- ತ್ತಿರುವ ಕತ್ತಲೆಯೊಳಗೆ ನಮ್ಮದೇ ಅದೊಂದು ಪುಟ್ಟ ಹಣತೆಯ ನಾವು ಹುಡುಕಿಟ್ಟು ಕೊಳ್ಳೋಣ............' ಎಂದು ಹೇಳುತ್ತಾರೆ ಅವರು `ದೀಪ ಚಿಂತನೆ' ಎಂಬ ಕವನದಲ್ಲಿ. `....ಮಾತು-ಕೃತಿಗಳ ನಡುವೆ, ಬದುಕು-ಬರಹದ ನಡುವೆ, ಕನಸು--ನನ- ಸಿನ ನಡುವೆ ತೂರಿಸುವ ವಿಕೃತಿ- ಯನ್ನೆದುರಿಸಲು ಸಾಕು ಒಂದೇ ಒಂದು ವಾಗರ್ಥ ಚಂದ್ರನ ಪ್ರಣತಿ' ಎಂಬ ಆಶಾಭಾವನೆ ಅವರಲ್ಲಿ ಬೇರೂರಿದೆ. `ಸಂಘಟನೆಯೇ ಸಂಸ್ಕೃತಿ, ವಿಂಗಡನೆಯೇ ವಿಕೃತಿ'" `ಮಾನವೀಯತೆಯ ಸಂಬಂಧಗಳನ್ನು ಒಡೆಯುವ ಎಲ್ಲ ವಿಕಾರಗಳನ್ನೂ ವಿರೋಧಿಸುವುದೇ ನನ್ನ ನಿಲುವು' - ಎಂಬುದು ಅವರ ದಿಟ್ಟ ಧ್ಯೇಯ! ಅಂತಹ ಧ್ಯೇಯಗಳನ್ನು ಸಾಧಿಸಲು ಪ್ರೀತಿಯೇ ಮುಖ್ಯ ಸಾಧನವೆಂದು ಹೇಳುತ್ತಾರೆ ಜಿ.ಎಸ್.ಎಸ್. ಆಗ, ತಿರುಗಿ, ತಮ್ಮ ಕವನದ `ಪ್ರೀತಿ-ಕರುಣೆ, ಸ್ನೇಹ-ಮರುಕ, ಇದೇ ನಮ್ಮ ದೇವರು' ಎಂಬ ಸಾಲನ್ನು ಮತ್ತೊಮ್ಮೆ ಉದ್ಧರಿಸಿದರು. ಇವೇ ನಮ್ಮನ್ನು ಒಟ್ಟುಗೂಡಿಸುವ ಸಾಧನ. `ಯಾವುದು ನಮ್ಮನ್ನು ಕೂಡಿಸುವುದೋ, ಅದೇ ಸಂಸ್ಕೃತಿ; ಯಾವುದು ನಮ್ಮನ್ನು ಒಡೆಯುವುದೋ, ಅದೇ ವಿಕೃತಿ'. ಈ ನಿಲುವೇ ತಮ್ಮ ಜೀವನ ಕ್ರಮದಲ್ಲೂ, ತಮ್ಮ ಹಲವು ಕವನಗಳಲ್ಲೂ ಮೂಡಿಬರುವಂತೆ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು. ಇಲ್ಲಿ ಬಂದು ನೆಲೆಸಿದ ಕನ್ನಡಿಗರಲ್ಲಿ, ತಾಯ್ನಾಡನ್ನು ಬಿಟ್ಟು ಬಂದರೂ, ಸಂಘಟನೆಯ ಮನೋಭಾವ ಹೆಚ್ಚಿನವರಲ್ಲಿ ಎದ್ದು ಕಾಣುತ್ತಿರುವುದನ್ನು ಶ್ಲಾಘಿಸುತ್ತ, - `ಸಂಘಟನೆಯು ಒಂದು ಮಹಾಶಕ್ತಿ, ಆ ಶಕ್ತಿಯು ಕನ್ನಡಿಗರಲ್ಲಿ ಹೆಚ್ಚಿನಿಂದ ಬೆಳೆದು ಬರಲಿ' - ಎಂದು ಹಾರೈಸಿದರು. ಅವರಂದಂತೆ `ಸಂಘನೆಯೇ ಸಂಸ್ಕೃತಿ; ವಿಂಗಡನೆಯೇ ವಿಕೃತಿ.' ಈ ಅಪೂರ್ವ ಸಂದೇಶದೊಂದಿಗೆ ನಮ್ಮ Kitchen Tableನ ಕಿರು `ಅಧಿವೇಶನ'ಗಳು ಕೊನೆಗೊಂಡವು. ಇಲ್ಲಿ ಅದನ್ನು `ಕಿರು ಅಧಿವೇಶನ'ವೆಂದು ಕರೆದಿದ್ದರೂ, ಅದರಿಂದ ನಾನು ಪಡೆದ ಅನುಭವ ಅಮೋಘವಾದುದು ಹಾಗೂ ಅನನ್ಯವಾದುದು. ಅಂತಹ ಅವಕಾಶ ಯಾವಾಗಲೂ ದೊರಕುವುದಿಲ್ಲ. ಶಿಕಾಗೊ ಸಂದರ್ಶನ ಅವರ ಪ್ರಯಾಣದ ಪಟ್ಟಿಯಲ್ಲಿ ಮೊದಲು ಸೇರಿಕೊಂಡಿರಲಿಲ್ಲ. ಆದರೆ, ನನ್ನ ಆಮಂತ್ರಣವನ್ನು ಪ್ರೀತಿಯಿಂದ ಮನ್ನಿಸಿ, ಶಿಕಾಗೋವನ್ನೂ ತಮ್ಮ ಕಾರ್ಯಕ್ರಮದಲ್ಲಿ ಸೇರಿಸಿಕೊಂಡು, ನಮ್ಮ ಅತಿಥಿಗಳಾಗಿ ಉಳಿದುದು ಅವರು ನಮ್ಮ ಮೇಲಿಟ್ಟ ಪ್ರೀತಿ-ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ. ಅವರು ನಾನು ಇತ್ತೀಚೆಗೆ (೨೦೦೪) ಸಂಪಾದಿಸಿದ `ಕುವೆಂಪು ಸಾಹಿತ್ಯ ಸಮೀಕ್ಷೆ' ಎಂಬ ಗ್ರಂಥಕ್ಕೆ ಮುನ್ನುಡಿ ಬರೆಯುತ್ತ, ನನ್ನ ವಿಚಾರವಾಗಿ - `ಯಾವಸಲ (ಅಮೆರಿಕಕ್ಕೆ) ಹೋದರೂ, "ನಮ್ಮಲ್ಲಿಗೆ ಬರದೆ ನೀವು ಹೇಗೆ ಹೋಗುತ್ತೀರಿ?" ಎಂದು ನನ್ನನ್ನು ತಾವಿದ್ದಲ್ಲಿಗೆ ಬರಮಾಡಿಕೊಂಡು ನನ್ನನ್ನು ತಮ್ಮ ಪ್ರೀತಿ-ವಿಶ್ವಾಸದಲ್ಲಿ ಕಟ್ಟು ಹಾಕಿದ ಕೆಲವರಲ್ಲಿ ಶ್ರೀ ಐತಾಳರು ಮೊದಲಿಗರು. ಶಿಕಾಗೋದಲ್ಲಿ ಅವರಿದ್ದಾಗ ಹೀಗೆ ನಾನೂ ಅವರೂ ಗಂಟೆಗಟ್ಟಲೆ ಏನೆಲ್ಲಾ ವಿಷಯಗಳನ್ನು ಕುರಿತು ನಡೆಸಿದ ಎಷ್ಟೋ ಸಂವಾದಗಳ ಸಂದರ್ಭಗಳು ಇನ್ನೂ ನನ್ನ ನೆನೆಪಿನಲ್ಲಿ ಹಸಿರಾಗಿದೆ' - ಎಂದು ಹೇಳಿದ್ದಾರೆ. ಅಲ್ಲದೆ, `ಮುನ್ನುಡಿಯ ನೆಪಮಾಡಿಕೊಂಡು ನನ್ನನ್ನು ತಮ್ಮ ಜತೆಗೆ ಸೇರಿಸಿಕೊಂಡಿದ್ದಾರೆ.' ಎಂದೂ ಬರೆದಿದ್ದಾರೆ. ಅವರಿಂದ ಈ ಮಾತುಗಳನ್ನು ಅನಿಸಿಕೊಂಡ ನಾನು ಎಲ್ಲಿಲ್ಲದ ಹೆಮ್ಮೆಗೊಳಗಾಗಿದ್ದೇನೆ. ಅವರ ಪ್ರೀತಿ-ವಿಶ್ವಾಸವನ್ನು ಪಡೆದ ನಾವು (ನಾನೂ, ನನ್ನ ಹೆಂಡತಿ ಲಕ್ಷ್ಮಿಯೂ) ಅವರಿಗೆ ಸದಾ ಕೃತಜ್ಞರು. ಅವರೊಡನೆ ನಡೆಸಿದ ವಿಚಾರಾತ್ಮಕ ಸ್ನೇಹಪರ ಸಂವಾದಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವುದರಲ್ಲಿ ಸಂದೇಹವಿಲ್ಲ! ಮತ್ತೆ ಮತ್ತೆ ಅವರೊಡನೆ ಸಂವಾದಿಸುವ ಇಂತಹ ಅವಕಾಶವನ್ನು ಬಯಸುತ್ತಲೇ ಇದ್ದೇನೆ. `ರಾಷ್ಟ್ರಕವಿ' ಸನ್ಮಾನ ಬಂದ ಸುದ್ದಿ ಕೇಳಿ, ನನ್ನಲ್ಲಿ ಮೂಡಿಬಂದ ಮೇಲ್ಕಂಡ ಭಾವನೆಗಳನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ, ಅಷ್ಟೆ! ಅವರಿಗೆ ಲಭಿಸಿದ ಈ ಗೌರವಾನ್ವಿತ ಸನ್ಮಾನಕ್ಕಾಗಿ ಮಾನ್ಯ ಶ್ರೀ ಶಿವರುದ್ರಪ್ಪನವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ಅವರಿಗೆ ಭಗವಂತನು ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ದಯಪಾಲಿಸಲೆಂದು ಬೇಡಿಕೊಳ್ಳುತ್ತ ಈ ಲೇಖನವನ್ನು ಮುಗಿಸುತ್ತೇನೆ. - ಆಹಿತಾನಲ, ಆರ್ಕೇಡಿಯ, ದ. ಕ್ಯಾಲಿಫೋರ್ನಿಯ |