ಯು.ಎಸ್.ಎ.ನಲ್ಲಿರುವ ಕನ್ನಡ ಸಾಹಿತ್ಯ ರಂಗದ ಎರಡನೇ ಸಮ್ಮೇಳನದಲ್ಲಿ ಬಿಡುಗಡೆಯಾದ "ಆಚೀಚೆಯ ಕಥೆಗಳು" ಕಥಾಸಂಕಲನದಲ್ಲಿ "ಶಬ್ದ" ಪ್ರಕಟವಾಗಿದೆ.
ಕತೆಗಾರ ಶರತ್.ಜಿ.ನೊಣಬೂರು ವೃತ್ತಿಯಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದು, ಡೆಟ್ರಾಯಿಟ್, ಮಿಶಿಗನ್‍ನಲ್ಲಿ ವಾಸವಾಗಿದ್ದಾರೆ - ಸಂ
ದಿನಾಂಕ: ೦೨-ಆಗಸ್ಟ್-೨೦೦೫
ಇದು ಮೂರನೆ ಬಾರಿ ಅಮೇರಿಕಕ್ಕೆ ಬರ್ತಾ ಇರೋದು. ಈ ಮಾಹಿತಿ ತಂತ್ರ ಜ್ಞಾನ ಸಂಸ್ಥೆಗಳಲ್ಲಿ ಕೆಲಸ ಮಾಡೋರಿಗೆ ಇದೊಂದು ಗೋಳು. ಎಲ್ಲೂ ಶಾಶ್ವತವಾಗಿ ಟೆಂಟ್ ಹಾಕ್ಕೊಂಡು ಕೂರಕ್ಕಾಗಲ್ಲ. ಪ್ರಾಜೆಕ್ಟ್ ಇದ್ದ ಕಡೆ ಹೋಗ್ಬೇಕು, ಪ್ರಾಜೆಕ್ಟ್ ಮುಗ್ಯೋವರೆಗೆ ಆ ಜಾಗ, ಆ ದೇಶ ನಮ್ದು ಅಂದ್ಕೋಬೇಕು. ಪ್ರಾಜೆಕ್ಟ್ ಮುಗಿತೀದ್ದಂಗೆ ಮತ್ತೆ ಸಾಮಾನು, ಸರಂಜಾಮು ಪ್ಯಾಕ್ ಮಾಡೋದು, ಮರಳಿ ನಮ್ಮೂರಿಗೆ ಶಿಫ್ಟ್ ಮಾಡೋದು, ವಿಮಾನ ಹತ್ತೋದು. ಕೆಲವೊಮ್ಮೆ ಬೇಜಾರು ಅನ್ಸೊತ್ತೆ, ಮತ್ತೆ ಕೆಲವೊಮ್ಮೆ ಹೊಸ ಹೊಸ ಜಾಗ ನೋಡೊ, ಅಲ್ಲಿನ ಸಂಸ್ಕೃತಿ, ಬದುಕಿನ ರೀತಿ ನೋಡೋ ಅವಕಾಶ ಸಿಗುತ್ತಲ್ಲ ಅನ್ನೋ ಸಂತೋಷಾನೂ ಇರುತ್ತೆ, ಜೊತೆಗೆ ಡಾಲರ್, ಪೌಂಡ್, ಯುರೋ ಗಳ ಆಕರ್ಷಣೆ ಬೇರೆ.
ಈ ಸಾರಿ ನಾನು ಬಂದಿದ್ದು ನ್ಯೂಜೆರ್ಸಿ ಹತ್ತಿರ ಒಂದು ಊರಿಗೆ. ಊರು ತೀರಾ ಹಳ್ಳಿನೂ ಅಲ್ಲ, ತೀರ ಪೇಟೆನೂ ಅಲ್ಲ, ಆ ತರದ್ದು. ಬಂದ ಮೊದಲ ಎರಡು ವಾರ ಹೋಟೆಲ್‍ನಲ್ಲಿ ಉಳ್ಕೊಂಡು, ಮನೆ ಹುಡ್ಕೋಕೆ ಶುರು ಮಾಡಿದೆ. ನಮ್ಮಂತಹ ವರ್ಷ, ೬ ತಿಂಗಳಿಗೆ ಬರೋರು ಬಿಡಿ ಮನೆಗಳಿಗಿಂತ ಅಪಾರ್ಟ್‍ಮೆಂಟ್‍ಗಳನ್ನ ಇಷ್ಟ ಪಡೋದೆ ಹೆಚ್ಚು. ಸ್ನೋ ಬಿದ್ದಾಗ ಕಾರ್ ನಿಲ್ಸೋ ಜಾಗ ಕ್ಲೀನ್ ಮಾಡೋ ತಾಪತ್ರಯ ಆಗ್ಲಿ, ಹುಲ್ಲು ಬೆಳ್ದಾಗ ಅದನ್ನು ಸವರಿ, ಕತ್ತರ್ಸಿ ಸಮ ಮಾಡೋದಾಗ್ಲಿ, ಟಾಯ್ಲೆಟ್‍ನಲ್ಲಿ ನಲ್ಲಿ ಹಾಳಾದ್ರೆ ರಿಪೇರಿ ಮಾಡೋ ತಲೆ ನೋವಾಗ್ಲಿ ಇರೊಲ್ಲ. ಅಪಾರ್ಟ್‍ಮೆಂಟ್ ಮ್ಯಾನೇಜರ್ ಇದೆಲ್ಲಾ ನೋಡ್ಕೊಳ್ಳೊದ್ರಿಂದ ಬಾಡ್ಗೆ ತೊಗೊಂಡವ್ರು ಮನೆ ಒಳಗೆ ಕ್ಲೀನ್ ಆಗಿ ಇಟ್ಕೊಂಡ್ರೆ ಸಾಕು. ಮೊದ್ಲೇ ಹೇಳಿದ ಹಾಗೆ, ನಾನು ಪ್ರಾಜೆಕ್ಟ್ ಮಾಡಬೇಕಾದ ಕಂಪನಿ ಇದ್ದಿದ್ದು ಸಣ್ಣ ಊರಾಗಿದ್ರಿಂದ ಜಾಸ್ತಿ ಅಪಾರ್ಟ್‍ಮೆಂಟ್‍ಗಳು ಬಾಡಿಗೆಗೆ ಇರಲಿಲ್ಲ. ಜೊತೆಗೆ ಈ ಊರು ನ್ಯೂಯಾರ್ಕ್‍ಗೆ ಬೇರೆ ಹತ್ರ ಇದ್ದಿದ್ರಿಂದ ಅಲ್ಲಿಗೆ ಕೆಲಸ ಮಾಡೋಕೆ ಹೋಗೊವ್ರೂ, ಸ್ವಲ್ಪ ಕಡಿಮೆ ಬಾಡಿಗೆಗೆ ಸಿಗುತ್ವೆ ಅನ್ನೋ ಕಾರಣಕ್ಕೆ ಇಲ್ಲೇ ಸುತ್ತ ಮುತ್ತಲು ಬಾಡಿಗೆಗೆ ಮನೆಗಳನ್ನು ಹಿಡಿದಿದ್ರು. ನಂಗೆ ಪ್ರಾಜೆಕ್ಟ್ ಕೆಲಸ ಜಾಸ್ತಿ ಇರುವ ಸಂಭವ ಇದ್ದಿದ್ದರಿಂದ, ಕೆಲಸ ಮಾಡುವ ಸ್ಥಳದ ಸಮೀಪವೇ ಯಾವುದಾದ್ರೂ ಮನೆ ಬಾಡಿಗೆಗೆ ಸಿಕ್ಕರೆ ಅನೂಕೂಲ ಅನ್ನೋ ಯೊಚನೆ.
ಸ್ಥಳೀಯ ದಿನ ಪತ್ರಿಕೆಗಳಲ್ಲಿ, ಮನೆ ಬಾಡಿಗೆ ವಿವರ ಕೋಡೋ ಅಂತರ್ಜಾಲ ತಾಣಗಳಲ್ಲಿ ನೋಡ್ಕೊಂಡು ಸುಮಾರು ೩-೪ Apartmentಗಳನ್ನು ಗುರುತು ಹಾಕಿಕೊಂಡೆ. ಶನಿವಾರ, ಭಾನುವಾರದ ರಜಾ ದಿನಗಳಲ್ಲಿ ಈ ಎಲ್ಲ ಮನೆಗಳನ್ನೂ ನೊಡಿ ಒಂದನ್ನು ಆಯ್ದುಕೊಳ್ಳೋ ಯೊಚನೆ ಮಾಡಿದೆ. ಹೋಗಿ ನೋಡಿದಾಗ, ಮೊದಲೆರಡು ಮನೆಗಳು, ತುಂಬಾ ಹಳೆಯದವೆನಿಸಿದವು. ಉಳಿದೆರಡರಲ್ಲಿ, ಒಂದರ ಬಾಡಿಗೆ ನನ್ನ ಬಡ್ಜೆಟ್‍ಗೆ ಹೊಂದಿಕೆಯಾಗಲಿಲ್ಲ. ಹಾಗಾಗಿ ಉಳಿದ ಒಂದು ಮನೆಯನ್ನೇ ೬ ತಿಂಗಳ ಬಾಡಿಗೆಯ ಒಪ್ಪಂದಕ್ಕೆ ಬಾಡಿಗೆಗೆ ತಗೊಂಡೆ. ನನಗೋ, ಮೊದಲನೆ ಮಹಡಿಯ ಮನೆ ಬಾಡಿಗೆಗೆ ಸಿಕ್ಕಿದ್ರೆ ಒಳ್ಳೆಯದು ಅನ್ನೋ ಅಭಿಪ್ರಾಯವಿತ್ತು. ಈ ಹಿಂದಿನ ಭೇಟಿಗಳಲಿ, ನೆಲದಂತಿಸ್ತಿನ ಮನೆಗಳಲ್ಲಿದ್ದ ಅನುಭವದಿಂದ ನಾನು ಮೊದಲನೆ ಮಹಡಿಯ ಮನೆಯನ್ನೇ ಹುಡುಕುತ್ತಿದ್ದುದ್ದು. ಇಲ್ಲಿನ ಮರದಲ್ಲೇ ಕಟ್ಟಿದ್ದ ಮನೆಗಳಲ್ಲಿ, ಕೆಳಗಿನ ಮನೆಯಲ್ಲಿರುವವರಿಗೆ, ಮೇಲಿನ ಮನೆಯವರು ನಡೆದಾಡಿದರೆ, ಕುರ್ಚಿ, ಮಂಚ, ಮೇಜುಗಳನ್ನು ಸರಿದಾಡಿಸಿದಾರೆ, ಸಣ್ಣದಾಗಿ ಭೂಕಂಪವಾದ ಅನುಭವವಾಗುತ್ತೆ. ಅದೂ ಮೇಲಿನ ಮನೆಗಳಲ್ಲಿ, ಚಿಕ್ಕ ಮಕ್ಕಳಿದ್ದರಂತೂ ಇನ್ನೂ ಅವಸ್ಥೆ. ಆದರೆ, ನನ್ನ ದುರಾದೃಷ್ಟವಶಾತ್, ನಾನು ನೋಡಿದ ಅಪಾರ್ಟ್‍ಮೆಂಟ್‍ಗಳಲ್ಲೆಲ್ಲೂ ಮೊದಲ ಮಹಡಿಯ ಮನೆ ಖಾಲಿಯಿರಲಿಲ್ಲ. ಜೊತೆಗೆ, ಒಂದು ವರ್ಷದ ಬಾಡಿಗೆ ಒಪ್ಪಂದ ಮಾಡಿಕೊಂಡರೆ ಮಾತ್ರ ಮೇಲಿನ ಮಹಡಿ ಬಾಡಿಗೆ ಸಿಗುವುದೆಂಬ ಷರತ್ತು ಬೇರೆ. ಹಾಗಾಗಿ ವಿಧಿಯಿಲ್ಲದೇ, ನೆಲದಂತಸ್ತಿನ ಮನೆಯನ್ನೇ ಬಾಡಿಗೆಗೆ ಹಿಡಿಯಬೇಕಾಯಿತು.
ನಾನು ಈ ಊರಿಗೆ ಬಂದಿದ್ದು ಕ್ರಿಸ್ಮಸ್ ರಜೆಯ ವೇಳೆಯಾದ್ದರಿಂದ, ಅಪಾರ್ಟ್‍ಮೆಂಟ್ ಮನೆಗಳು ಗಲಾಟೆಯಿಲ್ಲದೆ ತಣ್ಣಗಿದ್ದವು. ಹೊರಗೆ ಚಳಿ, ಜೊತೆಗೆ ಸಂಜೆ ೫ ಗಂಟೆಗೆಲ್ಲ ಕತ್ತಲಾಗುವ ಡಿಸೆಂಬರ್ ವೇಳೆ ಬೇರೆ. ಅಂತೂ ಆ ವಾರದಲ್ಲಿ ಮನೆಗೆ ಬೇಕಾಗುವ ಸಾಮಾನೆಲ್ಲ ಖರೀದೀಸಿ, ಎಲ್ಲವನ್ನೂ ಒಪ್ಪ ಓರಣ ಮಾಡುವಷ್ಟರಲ್ಲಿ ಕ್ರಿಸ್ಮಸ್ ರಜೆ ಕಳೆದು ಆಫೀಸ್ ಕೆಲಸ ಆರಂಭವಾಯಿತು. ಕ್ರಮೇಣ, ಭಾರತ ಬಿಟ್ಟು ಬಂದ ಬೇಸರ ಮರೆಯಾಗಿ, ಹೊಸ ಜೀವನಕ್ಕೆ, ವೇಳಾ ಪಟ್ಟಿಗೆ, ಕೆಲಸಕ್ಕೆ ಹೊಂದಿಕೊಳ್ಳಲಾರಂಭಿಸಿದೆ.
ಅವತ್ತು ಸಂಜೆ ಆಫೀಸಿನಿಂದ ಮನೆಗೆ ಬಂದು, ಅಡುಗೆ ಮುಗಿಸಿ, ಎಂದಿನಂತೆ ನಮ್ಮೂರಿನ ಸುದ್ಧಿ ತಿಳ್ಯೋಕೆ ಅಂತರ್ಜಾಲದಲ್ಲಿ, ದಿನ ಪತ್ರಿಕೆಗಳನ್ನು ಓದುತ್ತಾ ಇದ್ದೆ. ಆಗ ಮೇಲುಗಡೆ, ಏನೊ 'ದಪ್' ಎಂದು ಬಿದ್ದ ಸದ್ದು ಕೇಳಿತು. ಸ್ವಲ್ಪ ಸಮಯದ ನಂತರ, ಸೈಕಲ್ ಓಡಿಸಿದ ಸದ್ದಾಯಿತು. ನನಗೆ ಥಟ್ಟನೆ, ನನ್ನ ಹಿಂದಿನ ಅಮೇರಿಕಾದ ವಾಸದ ಅನುಭವ ನೆನಪಿಗೆ ಬಂತು. ನಾನು ಯಾವ ಕಾರ್‍ಅಣಕ್ಕೆ ನೆಲದಂತಸ್ತು ಬೇಡವೆಂದುಕೊಂಡೆನೋ, ಆ ಕಾರಣ ನಿಜವಾಗಲಿದೆ ಎನ್ನಿಸಿತು. ಸ್ವಲ್ಪ ಹೊತ್ತಿನ ನಂತರ, ಮತ್ತೆ ಸೈಕಲ್ ಓಡಿಸಿದ ಸದ್ದು. ಬಹುಶ: ಚಿಕ್ಕ ಮಕ್ಕಳಿರುವ ಮನೆಯಿರಬೇಕು, ಹಗಲು-ಸಂಜೆ ಈ ಗಲಾಟೆಯಿದ್ದರೂ ರಾತ್ರಿ ನಿದ್ದೆ ಮಾಡುವಾಗ ತೊಂದರೆಯಾಗುವುದಿಲ್ಲವೆಂಬ ಯೊಚನೆಯಿಂದ ಮನಸ್ಸಿಗೆ ಸಮಾಧಾನ ತಂದುಕೊಂಡೆ.
ರಾತ್ರಿ ಸಿ.ಎನ್.ಎನ್. ಸುದ್ದಿ, ಇನ್ಯಾವುದೋ ಚಾನೆಲ್‍ನಲ್ಲಿ ಚಲನಚಿತ್ರ, ಹಾಗೆ, ಹೀಗೆ ಎಂದುಕೊಂಡು ಮಲಗುವಾಗ ಹನ್ನೊಂದೂವರೆ. ಬೆಳಿಗ್ಗೆ ಎಂಟು ಗಂಟೆಗೆ ಆಫೀಸ್‍ಗೆ ಹೋಗಬೇಕಿದ್ದರಿಂದ ಬೇಗ ನಿದ್ದೆ ಬಂದರೆ ಅನೂಕೂಲವಾಗುತ್ತೆಂದೆಣಿಸಿ ಮಲಗಿದೆ. ನಾಳೆಯಿಂದಾದರೂ ಸ್ವಲ್ಪ ಬೇಗ ಮಲಗುವ ಪ್ರಯತ್ನ ಮಾಡಬೇಕೆಂದು ಯೋಚಿಸಿದೆ. ಇನ್ನೇನು ನಿದ್ದೆ ಹತ್ತಲಿದೆಯೆಂದುಕೊಳ್ಳುವಷ್ಟರಲ್ಲಿ, ಮತ್ತೆ ಮೇಲಿನಿಂದ ಸೈಕಲ್ ಓಡಿಸಿದ ಶಬ್ದ. ಹಾಗೆಯೇ ಬಾತ್ರೂಮ್‍ನಲ್ಲಿ ನೀರು ಫ್ಲಶ್ ಮಾಡಿ, ಮತ್ತೆ ಸೈಕಲ್ ಓಡಿಸಿದ ಸದ್ದು. ನನಗೋ ಒಂದು ಕಡೆಯಿಂದ ನಿದ್ದೆ ಹಾಳಾಯಿತೆಂಬ ಕೋಪ, ಇನ್ನೊಂದು ಕಡೆಯಿಂದ ಏನೂ ಮಾಡಲಾಗದ ಅಸಹಾಯಕತೆಗಾಗಿ ಬೇಸರ. ನಿದ್ದೆಯ ವಿಷಯದಲ್ಲಿ ತುಂಬ ಸೂಕ್ಷ್ಮ ಪೃವೃತ್ತಿಯವನಾದ ನನಗೆ ಮತ್ತೆ ನಿದ್ದೆ ಹತ್ತುವಾಗ ಗಂಟೆ ಎರಡಾಗಿತ್ತು.
ಮರುದಿನ ಆಫೀಸ್‍ನಲ್ಲಿ, ನನ್ನ ಅಮೇರಿಕಾ ಸಹೋದ್ಯೋಗಿಯೊಡನೆ ಹೀಗೆ ಕುಶಲೋಪರಿ ಮಾತನಾಡುತ್ತಿದ್ದೆ. ನಿದ್ದೆಯಿಲ್ಲದೆ ಬಾಡಿದ್ದ ನನ್ನ ಮುಖ, ಕೆಂಪಾದ ಕಣ್ಣುಗಳನ್ನು ನೋಡಿದ ಅವನು, ಆರೋಗ್ಯ ಸರಿಯಿಲ್ಲವೆಂದು ಭಾವಿಸಿದ. ಆಗ ನಾನು ನನಗಾದ ಅನುಭವವನ್ನು ಹೇಳಿಕೊಂಡೆ. ಅದಕ್ಕವನು ಮೇಲಿನ ಮನೆಯವನ ಅಂಚೆ ಪೆಟ್ಟಿಗೆಯಲ್ಲಿ ನನಗಾಗುತ್ತಿರುವ ತೊಂದರೆಯನ್ನು ವಿವರಿಸಿ ಒಂದು ಪತ್ರವನ್ನು ಬರೆದಿಡುವಂತೆ, ಸಾಮಾನ್ಯವಾಗಿ ಆ ತರಹದ ಸೂಚನೆಗಳಿಗೆ ಇಲ್ಲಿನ ಜನ ಸ್ಪಂದಿಸುತ್ತಾರೆಂದು ತಿಳಿಸಿದ. ಸರಿ, ನಾನು ಒಂದು ಪತ್ರವನ್ನು ಆಫೀಸ್‍ನಲ್ಲೇ ಟೈಪ್ ಮಾಡಿ, ಮನೆಗೆ ಹಿಂತಿರುಗುವಾಗ, ನನ್ನ ಮನೆಯ ಅಂಚೆ ಪೆಟ್ಟಿಗೆಯ ಪಕ್ಕದಲ್ಲೇ ಇದ್ದ, ಆ ಮನೆಯ ಅಂಚೆ ಪೆಟ್ಟಿಗೆಗೆ ಹಾಕಿದೆ. ಆಗ ನನಗಾಶ್ಚರ್ಯವಾಗಿದ್ದು, ತುಂಬಿ ತುಳುಕುತ್ತಿದ್ದ ಆ ಅಂಚೆ ಪೆಟ್ಟಿಗೆ. ಬಹುಶ: ಆ ಮನೆಯವರು, ವಾರದಿಂದ ಅಂಚೆ ಪೆಟ್ಟಿಗೆಯನ್ನೂ ಗಮನಿಸಿಲ್ಲವೆಂದು ಅಂದುಕೊಂಡೆ.
ಅವತ್ತೂ ಹಿಂದಿನ ದಿನದ ಘಟನೆಯೇ ಪುನರಾವರ್ತನೆಯಾಯಿತು. ಧಪ್ಪೆಂದು ಏನೋ ಬಿದ್ದ ಸದ್ದು, ಸೈಕಲ್ ಓಡಿಸುವ ಸದ್ದು, ಜೊತೆಗೆ ರಾತ್ರಿ ಗಂಟೆ ಹನ್ನೆರಡಾದರೂ ಜೋರಾಗಿ ಸದ್ದು ಮಾಡುತ್ತಿದ್ದ ಟಿ.ವಿ, ಇತ್ಯಾದಿ, ಇತ್ಯಾದಿ. ರಾತ್ರಿ ಮಲಗುವಾಗ, ಕಿವಿಗೆ ಭದ್ರವಾಗಿ ಹತ್ತಿ ತುಂಬಿಕೊಂಡು ಮಲಗಿದ್ದರಿಂದ ನಿದ್ದೆಗೆ ಹೆಚ್ಚು ತೊಂದರೆಯಾಗಲಿಲ್ಲ. ಮಾರನೆಯ ದಿನದಿಂದ, ಆಫ಼ೀಸ್‍ಗೆ ಹೋಗುವ ವೇಳೆ, ಹಿಂದಿರುಗುವ ವೇಳೆ ಹಾಗೆ ಆ ಮನೆಯ ಕಡೆ ಗಮನಿಸಲು ತೊಡಗಿದೆ, ಯಾರದರೂ ಕಂಡರೆ ಹೋಗಿ ನನಗಾಗುತ್ತಿರುವ ತೊಂದರೆಯನ್ನು ಹೇಳಿಕೊಳ್ಳಲು. ಚಳಿಗಾಲ, ಜೊತೆಗೆ ೪:೩೦-೫:೦೦ ಗಂಟೆಗೆಲ್ಲ ಕತ್ತಲಾಗುತ್ತಿದ್ದರಿಂದ ಯಾರೂ ಕಾಣಿಸುತ್ತಲೇ ಇರಲಿಲ್ಲ. ಹಗಲಿಡೀ ಆಫೀಸ್‍ನಲ್ಲಿ ಇರುತ್ತಿದ್ದರಿಂದ ಆ ತೊಂದರೆ ಇರಲಿಲ್ಲವಾದರೂ, ಸಂಜೆಯಿಂದ ಮರುದಿನ ಆಫೀಸ್ ಹೋಗುವವರೆಗೆ, ಮೇಲಿನ ಸದ್ದಿನ ಉಪಟಳ ಅನುಭವಿಸಬೇಕಾದ ನನ್ನ ಪರಿಸ್ಥಿತಿ ಹಾಗೆಯೇ ಮುಂದುವರೆದ್ದಿತ್ತು. ಬಹುಶ: ನನ್ನ ಪತ್ರವನ್ನು ಉಪೇಕ್ಷಿಸಿದ್ದಾರೆಂದುಕೊಂಡು ಆಫೀಸ್‍ನಲ್ಲಿ ನನ್ನ ಸಹೋದ್ಯೋಗಿಯೊಂದಿಗೆ ಮತ್ತೆ ಈ ವಿಷಯವನ್ನು ಪ್ರಸ್ತಾಪಿಸಿದೆ. ಅವನು ಮುಖತ: ಹೋಗಿ ಮಾತನಾಡುವಂತೆಯೂ, ಆಗಲೂ ಆ ಮನೆಯವರು ನನ್ನ ತೊಂದರೆಗೆ ಗಮನಕೊಡದಿದ್ದರೆ, ಅಪಾರ್ಟ್‍ಮೆಂಟ್ ಮ್ಯಾನೇಜರ್ ಗೆ ದೂರು ಕೊಡುವಂತೆ ಸೂಚಿಸಿದ.
ಸಾಮಾನ್ಯವಾಗಿ ವಾರಾಂತ್ಯದಲ್ಲಿ ಇಲ್ಲಿನ ಜನ ಹೊರಗಡೆ ಕಾಲ ಕಳೆಯುವುದು ಹೆಚ್ಚು. ಹಾಗಾಗಿ ನಾನು ಸೋಮವಾರ ಆಫೀಸ್‍ನಿಂದ ಹಿಂತಿರುಗಿದ ನಂತರ, ಮೇಲಿನ ಮನೆಗೆ ಹೋಗಿ ನನ್ನ ಗೋಳನ್ನು ಹೇಳಿಕೊಳ್ಳಲು ನಿರ್ಧರಿಸಿದೆ. ಸೊಮವಾರ ಯಾವುದೋ ತುರ್ತು ಮೀಟಿಂಗ್‍ನಿಂದಾಗಿ ಮನೆಗೆ ಹಿಂತಿರುಗುವಾಗ ೭ ಗಂಟೆಯಾಗಿತ್ತು. ಆದರೂ ಮೊದಲೇ ನಿರ್ಧರಿಸಿದಂತೆ, ಸೀದಾ ಮೇಲಿನ ಮನೆಗೆ ಹೋದೆ. ಬಾಗಿಲು ತಟ್ಟಿದಾಗ ಯಾರೂ ಪ್ರತಿಕ್ರಿಯಸಲಿಲ್ಲ. ಜೋರಾಗೊಮ್ಮೆ ಬಾಗಿಲು ತಟ್ಟಿ, ಎದುರಿಗಿದ್ದ ಬೆಲ್ ಒತ್ತಿದೆ. ಆಗ ಗಂಡಸಿನೊಂದು ಸ್ವರ ಕೇಳಿಬಂತು. ಕಮ್ ಇನ್...ಒಳಗೆ ಬಾ, ಬಾಗಿಲು ತೆಗೆದೇ ಇದೆ. ನಾನು ಬಾಗಿಲನ್ನು ಮೆತ್ತಗೆ ದೂಡಿದಾಗ ಒಳಗಡೆಯಿಂದ ಭದ್ರ ಪಡಿಸದೇ ಇದ್ದ ಬಾಗಿಲು ನಿಧಾನವಾಗಿ ತೆರೆದುಕೊಂಡಿತ್ತು. ಒಳಗೆ ಹಾಲ್‍ನ ಮೂಲೆಯೊಂದರಲ್ಲಿ ವಿದ್ಯುತ್ ದೀಪವೊಂದು ಮಂದವಾಗಿ ಉರಿಯುತ್ತಿತ್ತು. ಟಿ.ವಿ.ಯಲ್ಲಿ ಯಾವೂದೋ ಚಾನೆಲ್‍ನಲ್ಲಿ ಇರಾಕ್ ಯುದ್ದ ಬೇಕಿತ್ತೇ, ಬೇಡವೇ ಎಂಬ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿತ್ತು. ನನ್ನ ಕಣ್ಣು ಆ ಬೆಳಕಿಗೆ, ವಾತವರಣಕ್ಕೆ ಇನ್ನು ಹೊಂದಿಕೊಳ್ಳುತ್ತಿರುವಾಗ, ಅಡುಗೆ ಮನೆಯಿಂದ ಮತ್ತೆ ಧ್ವನಿ ಕೇಳಿಸಿತು. ತಾನು ಊಟ ಮಾಡುತಿರುವೆನೆಂದು, ಸ್ವಲ್ಪ ಕಾಯುವಂತೆ ಹೇಳಿತು.
ಆ ಸಮಯದಲ್ಲಿ, ನಾನು ಗಮನಿಸಿದ್ದು ಮೂಲೆಯಲ್ಲಿ ಬಿದ್ದಿದ್ದ ಎರಡು ಊರುಗೋಲುಗಳು. ಅಲ್ಲೇ, ಪಕ್ಕದಲ್ಲಿದ್ದ ಎರಡು ಕೃತಕ ಕಾಲುಗಳು. ನನ್ನ ಗೊಂದಲ, ಅನುಮಾನಗಳು ಮುಂದುವರೆಯುತ್ತಿದ್ದಾಗ, ಅಡುಗೆ ಮನೆಯಿಂದ ನನಗೆ ಚಿರಪರಿಚಿತವಾಗಿದ್ದ, ಸೈಕಲ್ ತಳಿದ್ದ ಸದ್ದಾಯಿತು. ಗಾಲಿ ಕುರ್ಚಿಯಲ್ಲಿ ಕುಳಿತ್ತಿದ್ದ ಸುಮಾರು ೩೦ ವರ್ಷದ ಯುವಕ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ. ಆ ಕಣ್ಣುಗಳಲ್ಲಿ ಒಂದು ಬಗೆಯ ಹತಾಶೆ, ನೋವು, ಅಸಹನೀಯತೆ ತುಂಬಿತ್ತು. ಮುಖದ ಎಡಗಡೆಯ ಭಾಗ ಸುಟ್ಟಂತಾಗಿ ವಿಕಾರವಾಗಿತ್ತು. ನನಗೆ ಪಕ್ಕನೇ ಏನೂ ಮಾತನಾಡಲೂ, ಮಾಡಲು ತೋಚದಂತಾಗಿ, ಹಿಂತಿರುಗಿ ಬಾಗಿಲತ್ತ ಹೊರಟೆ. ಆಗ ಅವನು ಕೂಗಿದ್ದು ಕೇಳಿಸಿತು. ಹೇ, ನನ್ನ ಹೆಸರು ಸ್ಮಿತ್, ಸ್ಮಿತ್ ಮ್ಯಾಕ್ಸ್ವೆಲ್. ಬಾ. ಮಾತಾಡೋಣ.
ನನಗೋ, ಮನಸ್ಸಿನಲ್ಲಿ ಉಂಟಾಗಿದ್ದ ಗೊಂದಲ, ಆ ನಸು ಕತ್ತಲಿನ ವಾತವಾರಣ, ನಿರೀಕ್ಷಿಸದೇ ಇದ್ದ ಅವನ ಅಂಗವೈಕಲ್ಯ, ಎಲ್ಲ ಒಂದು ಬಗೆಯ ಭಯವನ್ನುಂಟು ಮಾಡಿತ್ತು. ನಾನು ಅವನ ಕೂಗಿಗೆ ಗಮನಕೊಡದೆ ಕೆಳಗಿಳಿಯಲು ಮೆಟ್ಟಿಲುಗಳ ಕಡೆ ಓಡಿದೆ. ಬಾಗಿಲ ಬಳಿ ತನ್ನ ಗಾಲಿ ಕುರ್ಚಿಯನ್ನು ತಳ್ಳಿಕೊಂಡು ಬಂದ ಅವನು ಹೇಳಿದ್ದು ಕೇಳಿಸಿತ್ತು. ಕಡೇ ಪಕ್ಷ ನನ್ನ ಅಂಚೆ ಡಬ್ಬದ ಪತ್ರಗಳನ್ನಾದರೂ ತಂದು ಕೊಟ್ಟು ಹೋಗುವಿಯ? ನಾನು ಸೀದ ಕೆಳಗೆ ನಡೆದು ಅವನ ಅಂಚೆ ಪೆಟ್ಟಿಗೆಯ ಎಲ್ಲ ಪತ್ರಗಳನ್ನೂ ಹೊರ ತೆಗೆದೆ. ಸುಮಾರು ಎಂಟು ದಿನಗಳ ಹಿಂದೆ ನಾನು ತುಂಬಿದ್ದ ಪತ್ರವೂ ಅಲ್ಲಿಯೇ ತಣ್ಣಗೆ ಕುಳಿತ್ತಿತ್ತು. ಆ ಕ್ಷಣದಲ್ಲಿ ನನಗೆ ಮತ್ತೊಂದಿಷ್ಟು ಗೊಂದಲವಾಯಿತು. ಆ ಪತ್ರವನ್ನು ಅವನಿಗೆ ಕೊಡುವುದು ವಿವೇಚನಾರಹಿತ, ಅಮಾನವೀಯ ವರ್ತನೆಯೆಂದು ಒಮ್ಮೆಯೆನಿಸಿದರೆ, ಅವನಿಗೆ ಮಾತುಗಳಲ್ಲಿ ಹೇಳಲಾಗದ ನನಗಾಗುತ್ತಿರುವ ತೊಂದರೆಯನ್ನು ಬರಹದ ಮೂಲಕ ತಿಳಿಸಲು ಇದೇ ಒಳ್ಳೆಯ ಸಮಯವೆಂದು ಇನ್ನೊಮೆಯೆನಿಸಿತು. ಎಲ್ಲ ಪತ್ರಗಳನ್ನೂ ಒಟ್ಟಾಗಿಸಿ, ಮೇಲ್ಗಡೆ ನನ್ನ ಪತ್ರವನ್ನೂ ಇರಿಸಿ, ಬಾಗಿಲವರಗೆ ಗಾಲಿ ಕುರ್ಚಿಯನ್ನು ತಳ್ಳಿಕೊಂಡು ಬಂದಿದ್ದ ಅವನ ಕೈ ಗೆ ಅವೆಲ್ಲವನ್ನೂ ತುರುಕಿ ಸೀದ ಕೆಳಗಡೆ ಬಂದೆ. ಅವನ ಮುಖದೆಡೆ ಕಣ್ಣು ಹಾಯಿಸದೇ, ಕಡೇ ಪಕ್ಷ ಒಂದು ಮುಗುಳ್ನಗೆಯನ್ನೂ ಕೊಡದೆ.
ಆ ಘಟನೆಯ ನಂತರದ ಎರಡು ದಿನಗಳಲ್ಲೂ ಮೇಲೆ ಆಗುತ್ತಿದ್ದ ಶಬ್ದಗಳಲ್ಲಿ ಅಂತಹ ಬದಲಾವಣೆಯೇನೂ ಕಾಣಲಿಲ್ಲ. ಹಾಗಾಗಿ ನಾನು ಆಪಾರ್ಟ್‍ಮೆಂಟ್ ಮ್ಯಾನೇಜರ್ ಬಳಿ ನನ್ನ ಸಂಕಟವನ್ನು ನಿವೇದಿಸಿಕೊಂಡೆ. ಸ್ಮಿತ್ ಆ ಮನೆಯಲ್ಲೆ ಹುಟ್ಟಿ ಬೆಳೆದಿದ್ದು, ಒಂದು ವರ್ಷದ ಹಿಂದೆ ಇರಾಕ್ ಯುದ್ದಕ್ಕೆ ಹೋಗಿದ್ದಾಗ ಬಾಂಬ್ ಸ್ಫೋಟದಲ್ಲಿ ತನ್ನೆರಡು ಕಾಲುಗಳನ್ನು ಕಳೆದುಕೊಂಡನೆಂದು ಮ್ಯಾನೇಜರ್ ಹೇಳಿದಾಗ ನನಗೆ ಸ್ಮಿತ್‍ನೊಡನೆ ನನ್ನ ವರ್ತನೆ ನೆನೆದು ಕಸಿವಿಸಿಯಾಯಿತು. ಅವನಿಗಾದ ಅಪಘಾತ ಕೇಳಿ ಅವನ ತಂದೆ ಹೃದಯಾಘಾತದಲ್ಲಿ ಸತ್ತಿದ್ದೂ, ಅವನ ಸ್ಟೆಪ್ ಮದರ್, ಬೇರೊಬ್ಬನನ್ನು ಮದುವೆಯಾಗಿದ್ದೂ, ಅವನ ತೀರ ಹತ್ತಿರದ ಗೆಳತಿ ಬೇರೊಬ್ಬನ ಜೊತೆ ಓಡಾಡುತ್ತಿರುವ ವಿವರಗಳು ತಿಳಿದು ಮನಸ್ಸು ಇನ್ನೂ ಮುದುಡಿತು. ಅವನ ಗೆಳೆಯನೊಬ್ಬ ವಾರಕ್ಕೊಮ್ಮೆ ಬಂದು ಸ್ಮಿತ್‍ನನ್ನು ಹೊರಗಡೆ ಕರೆದೊಯ್ಯುವನೆಂದು, ಆಪಾರ್ಟ್‍ಮೆಂಟ್‍ನ ಲಫ್ಟ್ ವ್ಯವಸ್ಥೆಗೆ ಸ್ಮಿತ್ ಇನ್ನೂ ಒಗ್ಗಿಕೊಂಡಿಲ್ಲವೆಂದೂ ಮ್ಯಾನೇಜರ್ ಹೇಳಿದ. ಇನ್ನೆರಡು ತಿಂಗಳಲ್ಲಿ ಬೇರೊಂದು ಮನೆ ಖಾಲಿಯಾಗಲಿದ್ದು, ಆ ಮನೆಯನ್ನು ನನಗೆ ಬಾಡಿಗೆ ಕೊಡುವ ವ್ಯವಸ್ಥೆ ಮಾಡುವೆನೆಂದು ಮ್ಯಾನೇಜರ್ ಹೇಳಿದಾಗ ನನಗೆ ಸ್ವಲ್ಪ ನಿರಾಳವೆನಿಸಿತು.
ಮತ್ತೆರಡು ದಿನ ಕಳೆದು ಶನಿವಾರ. ಆ ಶನಿವಾರದಂದು ನಾನು ನನ್ನ ಗೆಳೆಯನೊಬ್ಬನ ಮನೆಗೆ ಹೋಗಿ ಸಂಜೆ ಮನೆಗೆ ಹಿಂತಿರುಗಿದಾಗ ಮನೆಯ ಬಳಿ ಪೋಲಿಸ್ ಕಾರು, ಆಂಬುಲೆನ್ಸ್, ಜನಗಳ ಗುಂಪು ಕಂಡು ನನಗೆ ಗಾಬರಿಯಾಯಿತು. ನನ್ನ ಅಪಾರ್ಟ್‍ಮೆಂಟ್ ಬ್ಲಾಕ್‍ನಲ್ಲಿ ಇಷ್ಟೊಂದು ಜನರಿದ್ದಾರೆಂದು ತಿಳಿದದ್ದೇ ನನಗವತ್ತು. ಕಾರ್ ಪಾರ್ಕ್ ಮಾಡಿ, ಜನಗಳ ಗುಂಪಿನ ಸಮೀಪ ಹೋದಾಗ ಬಿಳಿ ಬಟ್ಟೆ ಮುಚ್ಚಿದ್ದ ದೇಹವೊಂದನ್ನು ಆಂಬುಲೆನ್ಸ್ ಒಳಗೆ ಮಲಗಿಸುತ್ತಿದ್ದರು. ಮುಚ್ಚಿದ ಬಟ್ಟೆಯೊಳಗೆ ಕಾಲುಗಳಿರಬೇಕಾದ ಜಾಗ ಖಾಲಿಯಿತ್ತು. ಪಕ್ಕದಲ್ಯಾರೋ ಮಾತನಾಡಿಕೊಳ್ಳುತ್ತಿದ್ದಿದ್ದು ಕೇಳಿಸಿತು. ಸುಮಾರು ೫ ಗಂಟೆಯ ವೇಳೆಗೆ ಗುಂಡಿನ ಶಬ್ದ ಕೇಳಿ ಜನ ಹೊರ ಬಂದಾಗ, ಸ್ಮಿತ್ ತನ್ನ ಮನೆಯ ಬಾಲ್ಕನಿಯಲ್ಲಿ ಗಾಲಿ ಚಕ್ರಕ್ಕೆ ಒರಗಿ ಕುಳಿತಿದ್ದನೆಂದು, ಎಡ ಕಿವಿಯ ಪಕ್ಕದಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತೆಂದು. ಅವನು ಬರೆದಿಟ್ಟಿದ್ದ ಪತ್ರದಲ್ಲಿ ತನ್ನಿಂದ ಬೇರ್‍ಎಯವರಿಗಾಗುತ್ತಿದ್ದ ತೊಂದರೆಗಳಿಗೆ ಕ್ಷಮೆ ಕೇಳಿದ್ದನೆಂದು ಹಾಗೂ ತಾನು ಯಾರಿಗೂ ಭಾರವಾಗಿರಲು ಇಚ್ಚಿಸದೇ ಈ ಕೆಲಸ ಮಾಡುತ್ತಿದೇನೆಂದು ಬರೆದಿಟ್ಟಿದ್ದನಂತೆ.
ಅವತ್ತು ರಾತ್ರಿ ಮಲಗಿದಾಗ ಮತ್ತೆ ನನಗೆ ನಿದ್ದೆ ಬರಲ್ಲಿಲ್ಲ. ಯಾವ ಕ್ಶಣದಲ್ಲಾದರೂ ಮತ್ತೆ ಸೈಕಲ್ ಶಬ್ದ ಕೇಳೀತು ಎಂದು ಮನಸ್ಸು ನಿರೀಕ್ಷಿಸುತ್ತಿತ್ತು. ಸ್ಮಿತ್‍ನ ಸಾವಿಗೆ ನಾನು ಒಂದು ಕಾರಣ ಎನ್ನುವ ಯೋಚನೆ ಪದೇ ಪದೇ ತಲೆಯಲ್ಲಿ ಬರುತ್ತಿತ್ತು. ಇಷ್ಟು ದಿವಸ ತೊಂದರೆ ಕೊಡುತ್ತಿದ್ದ ಶಬ್ದವಿಲ್ಲದೇ ಉಂಟಾದ ಮೌನ ಮನಸ್ಸಿನ್ನಲ್ಲಿ ಉಂಟು ಮಾಡುತ್ತಿದ್ದ ತಳಮಳದ ಶಬ್ದ ಅಸಹನೀಯವಾಗಿತ್ತು.
ಮರುದಿನ ಬಾಡಿಗೆಯ ಚೆಕ್ ಕೊಡಲು ಹೋದಾಗ ಅಪಾರ್ಟ್‍ಮೆಂಟ್ ಮ್ಯಾನೇಜರ್ ಸಿಕ್ಕಿದ. ಸೋ, ಈಗ ನೀನು ಮನೆ ಬದಲಾಯಿಸುವ ಪ್ರಮೇಯವಿಲ್ಲವಲ್ಲ ಎಂದು ಮುಗುಳ್ನಕ್ಕ. ಆ ನಗೆಯಲ್ಲೇನೋ ವ್ಯಂಗ್ಯವಿದ್ದಂತೆ ನನಗನಿಸಿ ಏನೂ ಮಾತನಾಡದೆ ಹಿಂತಿರುಗಿದೆ.